ಕಳೆದ ಒಂದೂವರೆ ವರ್ಷದಿಂದ ಶಿವಮೊಗ್ಗ ಎಸ್ಪಿಯಾಗಿದ್ದ ಕೆ.ಎಂ.ಶಾಂತರಾಜ್ ಅವರನ್ನು ಸರಕಾರ ಬೆಂಗಳೂರು ಸಂಚಾರಿ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಗಳೂರು ಎಸ್ಪಿಯಾಗಿದ್ದ ಬಿ.ಎಂ.ಲಕ್ಷ್ಮೀಪ್ರಸಾದ್ ಶಿವಮೊಗ್ಗದ ನೂತನ ಎಸ್ಪಿಯಾಗಿ ಬರಲಿದ್ದಾರೆ.
ಸಿಎಂ ಕುಟುಂಬಕ್ಕೆ ಆಪ್ತರಾಗಿದ್ದ ಶಾಂತರಾಜ್ ಶಿವಮೊಗ್ಗಕ್ಕೆ ಬಂದ ಮೇಲೆ ಉತ್ತಮವಾಗಿಯೇ ಕೆಲಸ ಮಾಡಿದ್ದರು. ಖಡಕ್ ಅಲ್ಲ ಆದರೆ ಕರಪ್ಟ್ ಕೂಡಾ ಅಲ್ಲ ಎಂಬ ಮಾತು ಇಲಾಖೆಯಲ್ಲಿತ್ತು. ಹಿಂದೆ ಸಚಿವ ಈಶ್ವರಪ್ಪ ಅವರು ಪರೋಕ್ಷವಾಗಿ ಶಾಂತರಾಜ್ ಕಾರ್ಯವೈಖರಿಯನ್ನು ಪ್ರಶ್ನೆಮಾಡಿದ್ದರಾದರೂ ಅವರನ್ನು ವರ್ಗಾವಣೆ ಮಾಡುವ ನಿರ್ಧಾರ ಆಗಿರಲಿಲ್ಲ. ಶಾಂತರಾಜ್ ಅವರ ಮಕ್ಕಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತಿದ್ದು, ಅವರು ಅಲ್ಲಿಗೆ ವರ್ಗಾವಣೆ ಮಾಡಬೇಕೆಂಬ ಕೋರಿಕೆ ಸಲ್ಲಿಸಿದ್ದರು. ಈ ಕೋರಿಕೆ ಆಧಾರದ ಮೇಲೆ ಶಾಂತರಾಜ್ ಅವರು ಶಿವಮೊಗ್ಗದಿಂದ ವರ್ಗಾವಣೆ ಹೊಂದಿದ್ದಾರೆ.
ನೂತನ ಎಸ್ಪಿ ಯಾರು ?
ಶಿವಮೊಗ್ಗಕ್ಕೆ ವರ್ಗಾವಣೆಯಾಗಿರುವ ಲಕ್ಷ್ಮೀಪ್ರಸಾದ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದರು. 2004 ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಪ್ರಸಾದ್ ಅವರು, ಯುಪಿಎಸ್ಸಿಯಲ್ಲಿ 151 ನೇ ರ್ಯಾಂಕ್ ಪಡೆದವರಾಗಿದ್ದಾರೆ. ಬಿಟೆಕ್ ಪದವೀಧರರಾಗಿರುವ ಅವರು, ಮೊದಲು ಐಟಿ ಕಂಪೆನಿ ಉದ್ಯೋಗಿಯಾಗಿದ್ದರು. ಅವರು ಈ ಹಿಂದೆ ವಿಜಯಪುರ ಎಸ್‍ಪಿಯಾಗಿ, ಬೆಂಗಳೂರಿನ ಇಂಟರ್‍ನಲ್ ಸೆಕ್ಯುರಿಟಿ ಎಸ್‍ಪಿಯಾಗಿ, ನಕ್ಸಲ್ ನಿಗ್ರಹದಳದ ಎಸ್‍ಪಿಯಾಗಿಯು ಕಾರ್ಯನಿರ್ವಹಿಸಿದ್ದಾರೆ.