ಕೊರೋನ ಹೆಚ್ಚಳ ಹಿನ್ನೆಲೆ: ಸಿಮ್ಸ್ ನಿರ್ದೇಶಕರ ಅದ್ಯಕ್ಷತೆಯಲ್ಲಿ ಸಭೆ
ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಸಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಸಕಲ ಸೌಲಭ್ಯಗಳಿದ್ದು, ಕೋವಿಡ್ ಸೆಂಟರ್‍ಗೆ 10 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕೋವಿಡ್ ಗುಣಲಕ್ಷಣವುಳ್ಳ ರೋಗಿಗಳ ತಪಾಸಣೆ ಮಾಡಬೇಕೆಂದು ನಿರ್ದೇಶಕರು ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯ ಸರ್ಜನ್ ಡಾ.ಶ್ರೀಧರ್, ಡಿ.ಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್ ಆಡಳಿತಾಧಿಕಾರಿ ಕೆ.ಎಚ್.ಶಿವಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಸಿಮ್ಸ್ನಲ್ಲಿರುವ ಕೋವಿಡ್ ಸೌಲಭ್ಯಗಳು:
ಕೋವಿಡ್ ಆಸ್ಪತ್ರೆಯಲ್ಲಿ ಪ್ರಸ್ತುತ 41 ರೋಗಿಗಳಿದ್ದು, 7 ರೋಗಿಗಳು ಐಸಿಯುನಲ್ಲಿದ್ದಾರೆ. 26 ರೋಗಿಗಳು ಆಮ್ಲಜನಕ ಅವಲಂಭಿತರಾಗಿದ್ದು, ಪ್ರತಿದಿನ 5 ರಿಂದ 6 ಜನ ಡಿಸ್‍ಚಾರ್ಜ್ ಆಗುತ್ತಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಎಲ್ಲಾ ಪರೀಕ್ಷೆಗಳ ಸೌಲಭ್ಯ ಸಿಟಿ, ಎಂಆರ್ ಐ, ಎಕ್ಸ್-ರೇ ಸೌಲಭ್ಯಗಳಿದ್ದು ಎಲ್ಲಾ ಔಷಧಿಗಳು ಲಭ್ಯವಿದೆ. ಪ್ಲಾಸ್ಮಾ ಥೆರಪಿ ಸೌಲಭ್ಯ ಕೂಡ ಇರುತ್ತದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರವಿದ್ದು ಪ್ರತಿದಿನ 500 ವ್ಯಾಕ್ಸಿನೇಷನ್ ಮಾಡಲಾಗುವುದು. 45 ವಯಸ್ಸು ಮೀರಿದವರ ಆಧಾರ್ ಕಾರ್ಡ್ ಸಹಿತ ಬಂದು ಸೌಲಭ್ಯಪಡೆಯಬಹುದಾಗಿದೆ.