Malenadu Mitra
ರಾಜ್ಯ ಶಿವಮೊಗ್ಗ

ನೆಚ್ಚಿನ ಅಧಿಕಾರಿ ವರ್ಗಾವಣೆ, ಜೈಲು ಆವರಣದಲ್ಲೊಂದು ಭಾವುಕ ಕ್ಷಣ

ಡಾ.ರಂಗನಾಥ್ ಪರಪ್ಪನ ಅಗ್ರಹಾರಕ್ಕೆ ವರ್ಗ. ಮಹೇಶ್ ಜಿಗಣಿ ಶಿವಮೊಗ್ಗ ಜೈಲಿಗೆ

ಅದೊಂದು ಭಾವುಕ ಕ್ಷಣ, ಎಲ್ಲರ ಕಣ್ಣಾಲಿ ತೇವಗೊಂಡಿದ್ದವು. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಾಮಾನ್ಯ, ಇಲ್ಲಿಯೂ ಈ ತನಕ ನೂರಾರು ವರ್ಗಾವಣೆಗಳಾಗಿವೆ. ಆದರೆ ಈ ಅಧಿಕಾರಿಯ ವರ್ಗಾವಣೆ ಮಾತ್ರ ಹೃದಯಕ್ಕೆ ತಟ್ಟಿದೆ ಈ ಕಾರಣದಿಂದಾಗಿಯೇ ಅಲ್ಲಿನ ಇಡೀ ಪರಿಸರ ಒಂದು ರೀತಿ ಭಾವಾಭಿಮಾನದಲ್ಲಿ ಮಿಂದೆದ್ದಿದೆ.
ಇದು ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರ ಬೀಳ್ಕೊಡುಗೆಯ ಸಂದರ್ಭ ಕಂಡು ಬಂದ ಸನ್ನಿವೇಶ.
ಕಳೆದ 21 ತಿಂಗಳಿಂದ ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಮುಖ್ಯ ಅಧೀಕ್ಷಕರಾಗಿ ಬಂದಿದ್ದ ಡಾ.ರಂಗನಾಥ್ ಇಡೀ ಜೈಲಿನ ಪರಿಸರವನ್ನು ಒಂದು ಪ್ರೀತಿಯ ಹಂದರವಾಗಿಸಿದ್ದರು. ಅವರಲ್ಲಿನ ತಾಯ್ತನದ ಗುಣ ಜೈಲಿನ ಸಿಬ್ಬಂದಿ ಹಾಗೂ ಕೈದಿಗಳಲ್ಲೂ ಕೂಡಾ ಒಂದು ರೀತಿಯ ಭಾವಣೆಗಳ ಬೆಸುಗೆ ನಿರ್ಮಿಸಿದ್ದರು. ಕೊರೊನ ಸಂಕಷ್ಟದಲ್ಲಿಯೇ ಒಂದು ವರ್ಷ ಕಳೆದ ಜೈಲಿನ ಪರಿಸರದಲ್ಲಿ ಒಂದು ಲವಲವಿಕೆಯ ವಾತಾವರಣ ನಿರ್ಮಾಣವಾಗಿತ್ತೆಂದರೆ ಅದು ಅಧಿಕಾರಿಯೊಬ್ಬರ ಜನಮುಖಿ ಕಾರ್ಯದಿಂದ ಎಂದರೆ ತಪ್ಪಾಗಲಾರದು.

ಮೈಸೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದಿದ್ದ ಮಹೇಶ್ ಎ ಜಿಗಣಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಡಾ.ರಂಗನಾಥ್ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷರಾಗಿ ನಿರ್ಗಮಿಸುತ್ತಿದ್ದಾರೆ. ಶನಿವಾರ ನಡೆದ ಬೀಳ್ಕೊಡುಗೆ ಸಂದರ್ಭದಲ್ಲಿ ಸಜಾ ಬಂಧಿಗಳೂ ಕೂಡಾ ತಮ್ಮ ಆಪ್ತರೊಬ್ಬರು ವರ್ಗವಾಗುತ್ತಿದ್ದಾರೆ ಎಂಬ ಭಾವದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ರಂಗನಾಥ ಅವರು ಮೂಲತಃ ಆಯುರ್ವೇದ ವೈದ್ಯರು ಈ ಕಾರಣದಿಂದಲೊ ಏನೊ ಜೈಲಿನ ಎಲ್ಲ ಸಮಸ್ಯೆಗಳನ್ನು ಚಿಕಿತ್ಸಕ ಮನೋಭಾವದಿಂದಲೇ ನೋಡುತ್ತಿದ್ದರು. ಸಜಾಬಂಧಿಗಳ ಮನ ಪರಿವರ್ತನೆಗಾಗಿ ಹಲವರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅಲ್ಲಿನ ಅರಿವು ಕಾರ್ಯಕ್ರಮ, ಕಾನೂನು ಅರಿವು ಶಿಬಿರಗಳು, ಸಂಗೀತ ಕಾರ್ಯಕ್ರಮ, ಚಿತ್ತಾರ, ವಸ್ತು ಪ್ರದರ್ಶನ, ಮನಪರಿವರ್ತನೆ ಸಿನೆಮಾ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಒಬ್ಬ ಮನೋವೈದ್ಯನಂತೆ ಕಾರ್ಯನಿರ್ವಹಿಸಿದ್ದರು ಎನ್ನುತ್ತಾರೆ ಸಜಾಬಂಧಿಗಳು.


ಜೈಲಿನ ಸಜಾಬಂಧಿಗಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ವೇದಿಕೆ ಕೊಟ್ಟಿದ್ದರು. ಜೈಲಿಗೆ ಯಾರೇ ಗಣ್ಯರು ಬಂದರು ಕೈದಿಗಳ ಪ್ರತಿಭೆ, ಚಿತ್ತಾರೆ ಅವರ ಆಸಕ್ತಿಗಳ ಬಗ್ಗೆ ಪರಿಚಯಿಸುತ್ತಿದ್ದರು ಈ ಎಲ್ಲ ಕಾರಣದಿಂದ ಶಿವಮೊಗ್ಗ ಜೈಲೆಂದರೆ ಗಲಾಟೆ, ರೌಡಿಸಂ ಕೂಪ ಎಂಬ ಅಪಖ್ಯಾತಿಯಿಂದ ಮುಕ್ತಗೊಳಿಸುವ ಪ್ರಯತ್ನ ರಂಗನಾಥ್ ಮಾಡಿದ್ದರು.

ಸಿಬ್ಬಂದಿಗಳ ನೆಚ್ಚಿನ ಅಧಿಕಾರಿ

ಶಿವಮೊಗ್ಗ ಜೈಲು ಆವರಣ ಎಂದರೆ ಅದೊಂದು ಉಪನಗರದ ರೀತಿಯೇ ಇದೆ. ರಂಗನಾಥ್ ಅವರು ಕಚೇರಿ ಅವಧಿಯಲ್ಲಿ ಮಾತ್ರ ಅಧಿಕಾರಿ. ಉಳಿದ ಸಮಯದಲ್ಲಿ ಆಳು-ಅರಸ ಎಂಬ ಭಾವನೆ ತೋರುತ್ತಿರಲಿಲ್ಲ. ಡಿ.ಗ್ರೂಪ್ ನೌಕರರಿಂದ ಹಿಡಿದು ಅಧಿಕಾರಿಗಳ ತನಕ ಎಲ್ಲರನ್ನೂ ಒಂದೇ ಭಾವದಲ್ಲಿ ಕಾಣುತಿದ್ದರು. ಎಲ್ಲರೊಂದಿಗೆ ಹಾಡು, ಹರಟೆ ಕ್ರೀಡೆ ಎಲ್ಲದರಲ್ಲೂ ಭಾಗಿಯಾಗುತ್ತಿದ್ದರು. ಜೈಲಿನ ಸಿಬ್ಬಂದಿಗಳ ಕುಟುಂಬ ಯಾವುದೇ ಶುಭ ಸಮಾರಂಭವನ್ನು ತಮ್ಮದೇ ಎಂದು ಬೆರೆಯುತ್ತಿದ್ದರು. ಸಿಬ್ಬಂದಿಗಳಿಗಾಗಿ ಹಲವು ಕಾರ್ಯಕ್ರಮ ಆಯೋಜಿಸುತ್ತಾ ಇಡೀ ಪರಿವಾರ ಒಂದು ಕುಟುಂಬವೇನೊ ಎಂಬಂತ ವಾತಾವರಣ ಜೈಲು ಆವರಣದಲ್ಲಿತ್ತು. ಯಾರದೇ ಮಕ್ಕಳು ಸಾಧನೆ ಮಾಡಿದರೆ ಅವರನ್ನು ಗುರುತಿಸಿ ಗೌರವಿಸುವ ಹೃದಯವಂತಿಕೆಯನ್ನು ರಂಗನಾಥ್ ತೋರುತ್ತಿದ್ದರು. ಈ ಕಾರಣದಿಂದಾಗಿ ತಮ್ಮ ನೆಚ್ಚಿನ ಅಧಿಕಾರಿ ವರ್ಗಾವಣೆಯಾಗುತ್ತಿರುವ ನೋವಿನಲ್ಲಿಯೂ ಅವರನ್ನು ದೇವರು ಇನ್ನಷ್ಟು ಎತ್ತರಕ್ಕೆ ಬೆಳೆಸಲಿ ಅವರ ಪ್ರೀತಿ ಆಲದ ಮರವಾಗಿ ಉಳಿದವರಿಗೂ ಸಿಗಲಿ ಎಂದು ಭಾವುಕರಾಗಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಹಾಯಕ ಅಧೀಕ್ಷಕ ಶಿವಾನಂದ ಶಿವಪುರೆ, ಕೇಂದ್ರ ಮಹಿಳಾ ಜೈಲಿನ ಸಹಾಯಕ ಅಧಿಕ್ಷಕಿ ಅನಿತಾ ಹಿರೇಮನಿ, ಜೈಲರ್‍ಗಳಾದ ಅನಿಲ್ ಕುಮಾರ್ ಎಸ್, ಮಹೇಶ ಎಸ್, ಭಾಗೀರಥಿ, ಸವಿತಾ, ಸುಷ್ಮಾ ಹಾಗೂ ಸಹಾಯಕ ಆಡಳಿತಾಧಿಕಾರಿ ಬಾಬು ಪೂಜಾರಿ ಸೇರಿದಂತೆ ಹಲವು ಸಿಬ್ಬಂದಿಗಳು ಹಾಜರಿದ್ದರು.

ಜೈಲು ಎಂದರೆ ಬರೀ ಹೊಡಿಬಡಿಯಿಂದಾಗಿ ಎಲ್ಲವೂ ಆಗುವುದಿಲ್ಲ. ಯಾವುದೊ ಕೆಟ್ಟಗಳಿಗೆಯಲ್ಲಿ ಅಪರಾಧ ಎಸಗುವ ಅವರ ಮನಪರಿವರ್ತನೆ ಮಾಡಿದರೆ ಸಮಾಜಕ್ಕೆ ಒಳಿತಾಗುತ್ತದೆ. ಅಧಿಕಾರಿ ಎಂಬ ಹಮ್ಮಿನಿಂದ ದರ್ಪ ತೋರಿದರೆ ಪ್ರೀತಿಯನ್ನು ಕಳೆದುಕೊಳ್ಳುತ್ತೇವೆ. ಕಾನೂನು ಮತ್ತು ಮಾನವೀಯ ನೆಲೆಯಲ್ಲಿ ಏನು ಮಾಡಬೇಕೊ ಅದನ್ನು ಮಾಡಿದ್ದೇನೆ. ಶಿವಮೊಗ್ಗ ಜೈಲಿನ ಕರ್ತವ್ಯ ಅವಧಿ ಖುಷಿ ಕೊಟ್ಟಿದೆ

ಡಾ.ರಂಗನಾಥ್, ನಿರ್ಗಮಿತ ಮುಖ್ಯ ಅಧೀಕ್ಷಕ

ಶಿವಮೊಗ್ಗ ಜೈಲಿನಲ್ಲಿ ರಂಗನಾಥ್ ಅವರು ಕೈದಿಗಳ ಮನಪರಿವರ್ತನೆ, ಶಿಕ್ಷಣ ಹಾಗೂ ಸಾಮಾಜಿಕ ಶಿಕ್ಷಣಕ್ಕೆ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ

  • ಮಹೇಶ್ ಎ ಜಿಗಣಿ, ಶಿವಮೊಗ್ಗ ಜೈಲು ಅಧೀಕ್ಷಕ

Ad Widget

Related posts

ರಾತ್ರಿತನಕ ಚೆನ್ನಿ ಹೆಸರಿದೆ,ಬೆಳಗ್ಗೆ ಬದಲಾದರೆ ನಮಗೆ ಗೊತ್ತಿಲ್ಲ!
ಕುತೂಹಲ ಉಳಿಸಿಕೊಂಡಿರುವ ಬಿಜೆಪಿ ಶಿವಮೊಗ್ಗ ಅಭ್ಯರ್ಥಿ

Malenadu Mirror Desk

ಶತಕ ದಾಟಿದ ಪೆಟ್ರೋಲ್ ಬೆಲೆ: ಸಿಎಂ ತವರಿನಲ್ಲಿ ಅಣಕು ಸಂಭ್ರಮಾಚರಣೆ

Malenadu Mirror Desk

ಹಾಡಾದ ಬಿಎಸ್‌ವೈ ಪೊಲಿಟಿಕಲ್ ಜರ್ನಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.