ರಾಜಕೀಯ ಏಳಿಗೆಗಾಗಿ ಯಾವುದೇ ಪಕ್ಷದಲ್ಲಿದ್ದರೂ ಸಹ ಸಮಾಜ ಅಂತ ಬಂದಾಗ ಎಲ್ಲರೂ ಒಂದಾಗಿರಬೇಕೆಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸೊರಬ ಪಟ್ಟಣದ ರಂಗಮಂದಿರದಲ್ಲಿ ತಾಲೂಕು ಆರ್ಯ ಈಡಿಗರ(ದೀವರ) ಸಂಘ, ಶ್ರೀ ನಾರಾಯಣಗುರು ವಿಚಾರ ವೇದಿಕೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನ ಸೊರಬ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಜತೆಗೆ ಇದ್ದ ವ್ಯಕ್ತಿ ಬೆಳೆಯಲು ಸಾಧ್ಯ. ನಾರಾಯಣ ಗುರು ಅಂತ ಮಹಾನ್ ಗುರುಗಳು ಸಮಾಜದವರು ಎಂಬುದಕ್ಕೆ ಹೆಮ್ಮೆಯಾಗಿದ್ದು, ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕಿದೆ. ಗುರುಪೀಠ ಖಾಲಿ ಇಟ್ಟುಕೊಂಡು ಸಂಘಟನೆಗೆ ಮುಂದಾಗಿದ್ದಲ್ಲಿ ಯಶಸ್ಸು ಸಾಧ್ಯವಿಲ್ಲ. ಗುರುಗಳ ಮುಂದಾಳತ್ವದಲ್ಲಿ ಸಂಘಟನೆಯಲ್ಲಿ ತೊಡಗಿದ್ದಲ್ಲಿ ಸಮಾಜ ಬಲಿಷ್ಠಗೊಳ್ಳಲು ಸಹಾಯಕವಾಗುತ್ತದೆ. ಉನ್ನತ ಹಂತದಲ್ಲಿ ನೌಕರರನ್ನು ಗೌರವಿಸುವ ಕೆಲಸವಾಗಬೇಕು. ಹಾಗೆಯೇ ಉನ್ನತ ಮಟ್ಟದಲ್ಲಿರುವ ನೌಕರರು ಸಮಾಜದ ಶ್ರೇಯೋಭಿವೃದ್ಧಿಗೆ ಒತ್ತು ನೀಡಬೇಕೆಂದರು.
ದಂತ ವೈದ್ಯ ಹಾಗೂ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಜ್ಞಾನೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಾತಿ ಸಂಘಟನೆ ದುರಂತವಾದರೂ ಕೂಡ ಇನ್ನೊಂದು ಜಾತಿ ಸಂಘಟನೆ ನೋಡಿ ನಾವುಗಳೂ ಸಂಘಟನೆಯಲ್ಲಿ ತೊಡಗುವ ಅನಿವಾರ್ಯತೆ ಇದೆ ಎಂದರು.
ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಪ್ರಾಸ್ತಾವಿಕ ಮಾತನಾಡಿದರು.
ತಾಲೂಕು ಆರ್ಯ ಈಡಿಗರ(ದೀವರ) ಸಂಘದ ಅಧ್ಯಕ್ಷ ಕೆ.ಅಜ್ಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿ, ಕರವೆ ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ ಸ್ವಾಗತಿಸಿ, ನಾಗರಾಜ್ ಹಳೇಸೊರಬ ಹಾಗೂ ಸುಮಿತ್ರಾ ನಾಯ್ಕ್ ನಿರೂಪಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನ ಸೊರಬದ ಅಧ್ಯಕ್ಷ ಜಗದೀಶ್ ಕುಳವಳ್ಳಿ, ತಾಲೂಕು ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಆರ್ಯ ಈಡಿಗರ(ದೀವರ) ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಜಿ.ಪಂ ಸದಸ್ಯರಾದ ತಾರ, ರಾಜೇಶ್ವರಿ, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಎಪಿಎಂಸಿ ಉಪಾಧ್ಯಕ್ಷ ಜೆ.ಪ್ರಕಾಶ್, ತಾ.ಪಂ ಸದಸ್ಯ ನಾಗರಾಜ್ ಚಿಕ್ಕಸವಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಹೆಚ್.ಗಣಪತಿ, ಶಾಂತಮ್ಮ, ಪ್ರೇಮಾ ಇತರರಿದ್ದರು.
ಆರ್ಯ ಈಡಿಗರ(ದೀವರ) ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ, ಹಿರಿಯ ಪತ್ರಕರ್ತ ಶಿವಪ್ಪ ಹಿತ್ಲರ್, ದಂತ ವೈದ್ಯ ಹಾಗೂ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಜ್ಞಾನೇಶ್, ಪೊಲೀಸ್ ಉಪ ನಿರೀಕ್ಷಕ ಟಿ.ಬಿ.ಪ್ರಶಾಂತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಈಡಿಗ ಸಮಾಜದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.