ಹಿರಿಯ ಸಹಕಾರಿ ಧುರೀಣ ಜೆಡಿಎಸ್ ಜಿಲ್ಲಾ ಅಧ್ಕ್ಷರೂ ಆಗಿದ್ದ ಆರ್.ಎಂ.ಮಂಜುನಾಥ ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಭಾವುಟ ನೀಡಿ ಮಂಜುನಾಥಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮಂಜುನಾಥ ಗೌಡರೊಂದಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ದುಗ್ಗಪ್ಪಗೌಡ, ತೀರ್ಥಹಳ್ಳಿ ತಾಲ್ಲೂಕು ಜನತಾದಳದ ಅಧ್ಯಕ್ಷ ಡಾ. ಟಿ.ಎಲ್. ಸುಂದರೇಶ್, ಮುಖಂಡರಾದ ಕೊಲ್ಲೂರಯ್ಯ, ಶಂಕರಘಟ್ಟದ ರಮೇಶ್, ಹಾಲಗದ್ದೆ ಉಮೇಶ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್, ಕಟ್ಟೆಹಕ್ಲು ಕಿರಣ್, ಮಟ್ಟಿನಮನೆ ರಾಮಚಂದ್ರ, ಮಂಡಗದ್ದೆಯ ಮಖಾನ್, ಜುಲ್ಫಿಕರ್, ಕುರುವಳ್ಳಿ ನಾಗರಾಜ್, ಹೊಸಕೆರೆ ರವಿ, ಸಿ.ಕೆ. ಪ್ರಸನ್ನ ಸೇರಿದಂತೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪರಾಭವ ಹೊಂದಿದ್ದ ಮಂಜುನಾಥ ಗೌಡರು, ಆ ಪಕ್ಷದಲ್ಲಿದ್ದರೂ ಸಕ್ರಿಯವಾಗಿರಲಿಲ್ಲ. ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಸೇರುವ ಬಗ್ಗೆ ಸುದ್ದಿ ಇತ್ತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಂಜುನಾಥ ಗೌಡರ ಕಾಂಗ್ರೆಸ್ ಸೇರ್ಪಡೆಗೆ ಪ್ರಬಲ ವಿರೋಧ ವ್ಯಕ್ತಮಾಡಿದ್ದರು. ಈ ಸಂಬಂಧ ಡಿ.ಕೆ ಶಿವಕುಮಾರ್ ಸಮ್ಮುಖದಲಿ ಮಾತುಕಡೆ ನಡೆದಿದ್ದು, ಕಿಮ್ಮನೆ ಅವರು ಬುದ್ದಿ ಹೇಳಿ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕೆಪಿಸಿಸಿಗೆ ಪತ್ರ ಬರೆದಿದ್ದರೆಂದು ಹೇಳಲಾಗಿದೆ.
ಸಮಾವೇಶ ಮುಂದೂಡಿಕೆ
ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಹಾಗೂ ಮಂಜುನಾಥ ಗೌಡರು ದೊಡ್ಡ ಸಮಾವೇಶ ನಡೆಸಿ ಕಾಂಗ್ರೆಸ್ ಸೇರಬೇಕೆಂಬ ಯೋಜನೆ ಹಾಕಿಕೊಂಡಿದ್ದರು. ಆದರೆ ಹೆಚ್ಚುತ್ತಿರುವ ಕೊರೊನ ಮತ್ತುಅದರ ನಿಯಮಾವಳಿಂದಾಗಿ ಸಮಾವೇಶ ಮುಂದಕ್ಕೆ ಹೋಗಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೂ ಮುನ್ನವೇ ಪಕ್ಷ ಸೇರುವ ಉದ್ದೇಶದಿಂದ ಸರಳವಾಗಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಬೆಳಗಾವಿಯಲ್ಲಿ ಪಕ್ಷ ಸೇರ್ಪಡೆ ಸಂದರ್ಭ ಮಾಜಿ ಸಚಿವ ಎಂ.ಬಿ. ಪಾಟೀಲ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.
ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ಮಾಡಲಾಗವುದು. ಕಾಂಗ್ರೆಸ್ ಸೇರುವ ಮೊದಲು ಅಭಿಮಾನಿಗಳು, ಬೆಂಬಲಿಗರ ಒಪ್ಪಿಗೆ ಪಡೆದುಕೊಂಡು ಸೇರುತ್ತಿದ್ದೇನೆ. ನನ್ನ ಜೊತೆ ಅವರೆಲ್ಲರೂ ಬರುತ್ತಿದ್ದಾರೆ— ಆರ್.ಎಂ.ಮಂಜುನಾಥಗೌಡ