ಕೊರೊನ ಕರಿನೆರಳಿನಲ್ಲಿಯೇ ಎರಡನೇ ವರ್ಷದ ಯುಗಾದಿ ಹಬ್ಬ ಬಂದಿದೆ. ಸರಕಾರದ ಮಾರ್ಗಸೂಚಿ ಇದ್ದರೂ ಜನರು ಕೊಂಚ ಸಡಗರದಿಂದಲೇ ಯುಗಾದಿ ಹಬ್ಬವನ್ನು ಆಚರಿದರು. ಇಂಧನ ಬೆಲೆಗೆ ಪೂರಕವಾಗಿ ಹಾಗೂ ಕೊರೊನ ಕಾರಣದಿಂದ ಅಗತ್ಯವಸ್ತುಗಳ ಬೆಲೆ ಏರಿಕೆ ನಡುವೆಯೂ ಹಬ್ಬದ ಸಂಭ್ರಮಕ್ಕೇನು ಕೊರತೆಯಿರಲಿಲ್ಲ.
ಮಲೆನಾಡಿನಾದ್ಯಂತ ಪ್ರಮುಖ ದೇವಾಲಯಗಳಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜೆಗಳು ನೆರವೇರಿದವು. ಪೂಜೆ ಪೂರ್ಣಗೊಂಡ ಬಳಿಕ ಸಂಜೆ ಜನರು ಬಂಧು ಬಾಂದವರು ಮತ್ತು ನೆರೆಹೊರೆಯವರೊಂದಿಗೆ ಬೇವು ಬೆಲ್ಲ ಹಂಚಿಕೊಂಡು ಪರಸ್ಪರ ಶುಭಕೋರಿ ಹಬ್ಬ ಆಚರಿಸಿದರು.
ಮಲೆನಾಡಿನಾದ್ಯಂತ ಬಿಸಿಲ ದಗೆ ಹೆಚ್ಚುತ್ತಿರುವುದರ ನಡುವೆಯೇ ಪೂರ್ವ ಮುಂಗಾರು ಮಳೆಗಳು ಅಲ್ಲಲ್ಲಿ ಬಿದ್ದಿದೆ. ಮಂಗಳವಾರ ಹೊಸನಗರ ಸುತ್ತಮುತ್ತಲ ಮಳೆ ಸುರಿದು ಕಾದ ಭೂಮಿಗೆ ತಂಪೆರೆದಿದೆ.
ಶಿವಮೊಗ್ಗ ಹೊಸಮನೆ ಬಡಾವಣೆಯಲ್ಲಿ ಕುಕ್ಕುವಾಡೇಶ್ವರಿ ದೇವಿ ಮತ್ತು ಹಾಲೇಶ್ವರಿ ದೇವಿಗೆ ವಿಶೇಷ ಪೂಜೆ ಮತ್ತು ರಾಜಬೀದಿ ಉತ್ಸವ ನಡೆಯಿತು. ಕೊರೊನ ಕಾರಣಕ್ಕೆ ಜಾತ್ರೆ ಸೇರಲು ಅವಕಾಶ ಇಲ್ಲದ ಕಾರಣ ಕಡಿಮೆ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ದೇವಿಯ ರಾಜಬೀದಿ ಉತ್ಸವದ ಸಂದರ್ಭದಲ್ಲಿ ಭಕ್ತರು ಮನೆ ಬಾಗಿಲಲ್ಲಿಯೇ ಪೂಜೆ ಸಲ್ಲಿಸಿ ಹಣ್ಣುಕಾಯಿ ಮಾಡಿಸಿಕೊಂಡರು.
ಜೈಲಲ್ಲಿ ಬೇವುಬೆಲ್ಲ
ಪ್ರಧಾನಿ ನರೇಂದ್ರ ಮೋದಿ ವಿಚಾರ ಮಂಚ್ ಕಾರ್ಯಕರ್ತರು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಬೇವು ಬೆಲ್ಲ ವಿತರಿಸುವ ಮೂಲಕ ವಿಶಿಷ್ಟವಾಗಿ ಯುಗಾದಿ ಆಚರಿಸಿದರು.
ಈ ಸಂದರ್ಭ ಮಂಚ್‍ನ ಅಧ್ಯಕಷ ಬಳ್ಳೇಕೆರೆ ಸಂತೋಷ್, ಬಜರಂಗದಳದ ದೀನದಯಾಳ್, ಜೈಲಿನ ಸಹಾಯಕ ಅಧೀಕ್ಷಕರಾದ ಶಿವಾನಂದ ಶಿವಪುರೆ, ಜೈಲರ್ ಅನಿಲ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಸಂದರ್ಭ ಲಘು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.