ಶಿವಮೊಗ್ಗ-ಹೊಸನಗರ ರಸ್ತೆಯಲ್ಲಿ ಸೂಡೂರಿನಿಂದ ರಿಪ್ಪನ್ ಪೇಟೆವರೆಗಿನ ಮಾರ್ಗದಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗಿದ್ದು, ಸೂಕ್ತ ಮಾರ್ಗಸೂಚಕಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಿರುವಿನ ರಸ್ತೆ ಇರುವುದರಿಂದ ಆಗಾಗ ಕಾರುಗಳು ಪಲ್ಟಿಯಾಗುತ್ತಿವೆ. ಶನಿವಾರ ರಾತ್ರಿ ಸೊನಲೆ ಶ್ರೀಧರ್ ಮೂರ್ತಿ ಅವರ ಮಗಳು ಮತ್ತು ಅಳಿಯ ಪ್ರಯಾಣಿಸುತ್ತಿದ್ದ ಕಾರು ಟ್ರಂಚ್‍ಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಸುತ್ತಿದವರಿಗೆ ಗಂಭೀರ ಪೆಟ್ಟಾಗಿಲ್ಲ. ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಕಾರು ಮುಂಭಾಗ ಜಖಂ ಆಗಿದೆ. ತಿಂಗಳ ಹಿಂದೆ ಇದೇ ಮಾರ್ಗದಲ್ಲಿ ಹೊಸನಗರಕ್ಕೆ ಹೋಗುತ್ತಿದ್ದ ಬೆಂಗಳೂರಿನವರ ಕಾರು ಪಲ್ಟಿಯಾಗಿ ಇಬ್ಬರು ಮಹಿಳೆಯರಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ತಿಂಗಳ ಅವಧಿಯಲ್ಲಿ ಮೂರ್ನಾಲ್ಕು ಅಪಘಾತ ಸಂಭವಿಸಿವೆ. ಸಿಗಂದೂರು, ರಾಮಚಂದ್ರಾಪುರ ಮಠ, ಕೊಲ್ಲೂರುಗಳಿಗೆ ಪ್ರಯಾಣಿಸುವ ಹೊರಗಿನವರ ವಾಹನಗಳು ಮೇಲಿಂದ ಮೇಲೆ ಅಪ್ಸೆಟ್ ಆಗುತ್ತಿವೆ.ಲೋಕೋಪಯೋಗಿ ಇಲಾಖೆಯವರು ಸಮರ್ಪಕವಾಗಿ ನಾಮಫಲಕ ಹಾಗೂ ಸಂಚಾರ ಮಾರ್ಗಸೂಚಿಗಳನ್ನು ಅಳವಡಿಸದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನಾದರೂ ಇಲಾಖೆಯವರು ಈ ಬಗ್ಗೆ ಗಮನ ಹರಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದರು.