Malenadu Mitra
ರಾಜ್ಯ ಶಿವಮೊಗ್ಗ

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿಯಲ್ಲಿ ಕಡ್ಡಾಯವಾಗಿ ಮೀಸಲಿರಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ. ಕೋವಿಡ್ ಪಾಸಿಟಿವ್ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿನ ಜನರಲ್ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿರೇಟರ್ ಸೌಲಭ್ಯ ಹೊಂದಿರುವ ಬೆಡ್‍ಗಳ ಪೈಕಿ ಶೇ.50ರಷ್ಟನ್ನು ಸರ್ಕಾರದ ಕೋಟಾದ ಅಡಿ ನೀಡಬೇಕು. ಒಂದು ವೇಳೆ ಈ ಬೆಡ್‍ಗಳನ್ನು ಬಳಸುವುದಿದ್ದರೆ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಈ ನಿರ್ದೇಶನ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಈ ಬಾರಿ ಕ್ರಮ ಜರುಗಿಸುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಈ ಹಿಂದೆಯೇ ನಿಗದಿಪಡಿಸಿದೆ. ಅದರಂತೆ ಶುಲ್ಕ ವಿಧಿಸಲು ಅವಕಾಶವಿದೆ. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಡಿಯೋ ಕಾನ್ಫರೆನ್ಸ್: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಅವರು ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಸೂಚನೆಗಳನ್ನು ನೀಡಿದರು.

ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಸಹ ಕೇರ್ ಸೆಂಟರ್ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಮನೆ ಆರೈಕೆಯಲ್ಲಿ ಇರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಮಾಹಿತಿಯನ್ನು ಪ್ರತಿದಿನ ಪಡೆಯಲು ತಾಲೂಕು ಮಟ್ಟದಲ್ಲಿ ತಂಡ ರಚಿಸಬೇಕು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಟ 50 ಆಕ್ಸಿಜನ್ ಬೆಡ್ ಸೌಲಭ್ಯ ಇರಬೇಕು. ವ್ಯಾಕ್ಸಿನೇಷನ್ ಲಭ್ಯತೆ ಬಗ್ಗೆ ಪ್ರತಿ ದಿನ ಮಾಹಿತಿ ನೀಡಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗರೂಕತಾ ಕ್ರಮಗಳ ಮೇಲುಸ್ತುವಾರಿಗೆ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. ಅಂಬುಲೆನ್ಸ್ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು ಎಂದು ಹೇಳಿದರು.

ರೂಪಾಂತರಿತ ಕರೋನಾ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪ್ರಾಥಮಿಕ ಸೋಂಕಿತರಲ್ಲಿ ಶೇ.30ರಷ್ಟು ಮಂದಿಗೆ ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್, ಅಪರ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ್ ಎಚ್.ಟಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ, ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ಧರ್ಮಸ್ಥಳದಿಂದ ಮೆಗ್ಗಾನ್ ಆಸ್ಪತ್ರೆಗೆ ಆಕ್ಸಿಜನ್

Malenadu Mirror Desk

ಎಂಜನಿಯರಿಂಗ್ ಕಾಲೇಜಲ್ಲಿ ಆಂಧ್ರ ಸಚಿವರ ಕನ್ನಡ ಕಲರವ
ಹಳೆಯ ವಿದ್ಯಾರ್ಥಿಗಳು ಜಾಗತಿಕ ಸಮ್ಮಿಲನ

Malenadu Mirror Desk

ಮಾತಿಗೆ ತಪ್ಪಿದ ಕಾಂಗ್ರೆಸ್ ಸರ್ಕಾರ:ಕೋಡಿಹಳ್ಳಿ ಚಂದ್ರಶೇಖರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.