Malenadu Mitra
ರಾಜ್ಯ ಶಿವಮೊಗ್ಗ

ನಿರಂತರ ಜ್ಯೋತಿ ಯೋಜನೆ ಹೆಚ್ಚುವರಿ ಪಾವತಿ ವಸೂಲು ಮಾಡಿ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಮಾರ್ಗಸೂಚಿ ಪ್ರಕಾರ ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರೂ, ಪಾವತಿ ಮಾಡಲಾಗಿರುವ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿನ ಲೋಪಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.

ಪೀಢರ್ ಬೇರ್ಪಡಿಸುವಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 41 ಮಾರ್ಗಗಳ ಕಾಮಗಾರಿಗೆ 105 ಕೋಟಿ ರೂ. ಬಿಲ್ಲು ಪಾಸು ಮಾಡಲಾಗಿದೆ. ಪ್ರಸ್ತುತ ಎಲ್ಲಾ ಮಾರ್ಗಗಳ ಕಾಮಗಾರಿ ಅನುಷ್ಟಾನದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೆ 28ಮಾರ್ಗಗಳ ತಪಾಸಣೆ ಕಾರ್ಯ ಪೂರ್ಣಗೊಂಡಿದ್ದು, ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ 71.55ಕೋಟಿ ರೂ. ಬಿಲ್ಲು ಪಾಸು ಮಾಡಲಾಗಿದೆ. ತಪಾಸಣೆಯಲ್ಲಿ ಸಾಮಾಗ್ರಿಗಳ ಖರೀದಿಯಲ್ಲಿ 4.80 ಕೋಟಿ ರೂ. ಹಾಗೂ ಕಂಬಗಳಿಗೆ ಮಾಡಲಾದ ಕ್ರಾಂಕ್ರೀಟ್‍ನಲ್ಲಿ 3.65ಕೋಟಿ ರೂ. ವ್ಯತ್ಯಾಸ ಕಂಡು ಬಂದಿದೆ. ಭದ್ರಾವತಿಯಲ್ಲಿ ಇನ್ನೂ 10ಮಾರ್ಗಗಳ ತಪಾಸಣೆ ಕಾರ್ಯ ಬಾಕಿ ಇದ್ದು ಎಲ್ಲಾ ಮಾರ್ಗಗಳ ತಪಾಸಣೆ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಚಿವರು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2017ರಲ್ಲಿ ಕಾಮಗಾರಿ ಅನುಷ್ಟಾನ ಪ್ರಾರಂಭಿಸಲಾಗಿದ್ದು, 2020ರ ಮಾರ್ಚ್‍ನಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿತ್ತು. ವಿಳಂಬ ಕಾಮಗಾರಿ ನಿರ್ವಹಿಸಿರುವುದಕ್ಕೆ ದಂಡ ವಿಧಿಸಬೇಕು. ಕಾಮಗಾರಿ ಅನುಷ್ಟಾನ ಪರಿಶೀಲಿಸಲು ತಜ್ಞರ ತಂಡವನ್ನು ರಚಿಸಲಾಗುವುದು. ಈ ತಂಡ ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಯೋಜನೆ ಅನುಷ್ಟಾನದ ಪ್ರಮುಖ ಸ್ಥಳಗಳಲ್ಲಿ ಯೋಜನೆ ಕುರಿತಾಗಿ ಮಾಹಿತಿ ಬೋರ್ಡ್ ಅಳವಡಿಸಲಾಗುತ್ತಿದೆ. ಶಿವಮೊಗ್ಗ ವೃತ್ತದಲ್ಲಿ ಅವಾರ್ಡ್ ನೀಡಲಾದ ಪೂರ್ಣ ಮೊತ್ತಕ್ಕೆ ಇಂಡಿಮ್ನಿಟಿ ಬಾಂಡ್ ಪಡೆಯಲಾಗಿದೆ. ಕಂಬಗಳನ್ನು ನಿಗದಿಪಡಿಸಿದ ತಾಂತ್ರಿಕ ಗುಣಮಟ್ಟಕ್ಕೆ ಅನುಗುಣವಾಗಿ ಅಳವಡಿಸಲಾಗಿದೆಯೇ ಎಂಬುವುದನ್ನು ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದ್ದು, ಏಜೆನ್ಸಿಯವರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಕಾಮಗಾರಿಯಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ಪುರದಾಳಲ್ಲಿ ವಿಜೃಂಬಣೆ ರಥೋತ್ಸವ , ಪ್ರೇಕ್ಷಕರ ಗಮನ ಸೆಳೆದ ಯಕ್ಷಗಾನ

Malenadu Mirror Desk

ಸುವರ್ಣ ಮಹೋತ್ಸವ: ಪದವೀಧರ ಸಹಕಾರ ಸಂಘದಿಂದ ಕುವೆಂಪು ವಿವಿಯಲ್ಲಿ ಮೂರು ಚಿನ್ನದ ಪದಕ ಸ್ಥಾಪನೆ

Malenadu Mirror Desk

ಭೀಕರ ಅಪಘಾತ ಮೂವರು ಯುವಕರು ಸಾವು, ಒಬ್ಬ ಗಂಭೀರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.