ಕೋವಿಡ್ ಮಾರ್ಗಸೂಚಿ ಅನ್ವಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಶಿವಮೊಗ್ಗ ನಗರದಲ್ಲಿ ಒಂದು ರೀತಿಯ ಅಘೋಷಿತ ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಗಾಂಧಿಬಜಾರ್,ನೆಹರು ರಸ್ತೆ ಹಾಗೂ ಬಿ.ಹೆಚ್ ರಸ್ತೆ ಸೇರಿದಂತೆ ಹಲವು ಕಡೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಉಳಿದ ಕಡೆ ವ್ಯಾಪಾರ ವಹಿವಾಟು ಎಂದಿನಂತೆ ಮುಂದುವರಿದಿತ್ತು.
ಬಾಗಿಲು ತೆಗೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಬಂದ್ ಮಾಡುವಂತೆ ಪೊಲೀಸರು ಬಂದ್ ಮಾಡುವಂತೆ ಸೂಚನೆ ನೀಡಿದರು.ರಾಜ್ಯ ಸರ್ಕಾರದ ನೂತನ ಮಾರ್ಗಸೂಚಿಯನ್ವಯ ಅಂಗಡಿಗಳನ್ನು ಬಂದ್ ಮಾಡುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದರು.
ಅಲ್ಲದೇ ಬೇಕರಿ ಅಂಗಡಿಗಳನ್ನು ಕೂಡ ಬಂದ್ ಮಾಡುವಂತೆ ಬೇಕರಿ ಮಾಲೀಕರಿಗೆ ಪೊಲೀಸರು ಸೂಚನೆ ನೀಡಿದರು. ಈ ವೇಳೆ ಪೊಲೀಸರು ಮತ್ತು ಬೇಕರಿ ಅಂಗಡಿಗಳ ಮಾಲೀಕರು ಅಸಮಾಧಾನ ತೋಡಿಕೊಂಡರು. ಬೇಕರಿ ಪರಿಕರಗಳು ಅಗತ್ಯವಸ್ತುಗಳ ಸಾಲಿಗೆ ಸೇರುವುದರ ಬಗ್ಗೆ ಮನವಿ ಮಾಡಿದ್ದರಿಂದ ಜಿಲ್ಲಾಧಿಕಾರಿ ಅವಕಾಶ ಮಾಡಿಕೊಡಲು ಸೂಚನೆ ನೀಡಿದರು.
ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯದ ಕರ್ಫ್ಯೂ ಆರಂಭವಾಗಲಿದೆ.ಅಲ್ಲದೇ ಮಾರುಕಟ್ಟೆಯಲ್ಲಿ ಗುಟ್ಕಾ,ತಂಬಾಕು ಉತ್ಪನ್ನಗಳನ್ನು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.ಮದ್ಯದಂಗಡಿಗಳಲ್ಲೂ ಕೂಡ ಭರ್ಜರಿ ವ್ಯಾಪಾರ ನಡೆಯುತ್ತಿದೆ.೨ ದಿನ ವಾರಂತ್ಯ ಕರ್ಫ್ಯೂ ಇರುವುದರಿಂದ ಬರೋಬ್ಬರಿ ೫೭ ಗಂಟೆಗಳ ಕಾಲ ಮದ್ಯ ಸಿಗುವುದಿಲ್ಲ ಎನ್ನುವುದನ್ನು ಮನಗೊಂಡಿರುವ ಪಾನಪ್ರಿಯರು ಎಣ್ಣೆ ಅಂಗಡಿಗಳಿಗೆ ಮುಗಿಬಿದ್ದು ಎರಡು ಮೂರು ದಿವಸಕ್ಕಾಗುವಷ್ಟು ಮದ್ಯ ಖರೀದಿಸುತ್ತಿದ್ದಾರೆ.
ವಾಹನ ಸಂಚಾರ ವಿರಳ
ನಗರದಲ್ಲಿ ವಾಹನಗಳ ಸಂಚಾರ ತುಂಬಾ ವಿರಳವಾಗಿತ್ತು. ಕಡಿಮೆ ಸಂಖ್ಯೆಯ ಬಸ್‌ಗಳ ಸಂಚಾರವಿತ್ತಾದರೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರಲಿಲ್ಲ.ಕೆಲವು ಮಾರ್ಗದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ದ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಸಾರಿಗೆ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ವರ್ತಕರ ಆಕ್ರೋಶ
ಅತಿ ಹೆಚ್ಚು ಜನಸಂದಣಿ ಸೇರುವ ನಗರದ ಗಾಂಧಿಬಜಾರ್ ನಲ್ಲಿ ಅಂಗಡಿಗಳನ್ನು ದಿಢೀರ್ ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡಿದರು.ಜಿಲ್ಲಾಡಳಿತದ ಈ ನಡೆಗೆ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ದಿನಕ್ಕೊಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಿದೆ.ಇದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ.ಕಳೆದ ವರ್ಷದ ಲಾಕ್ ಡೌನ್ ನಿಂದ ವ್ಯಾಪಾರ ವಹಿವಾಟು ಇಲ್ಲದೆ ನಷ್ಟ ಅನುಭವಿಸಿದ್ದೇವೆ.ಈಗ ಮತ್ತೊಮ್ಮೆ ಲಾಕ್ ಡೌನ್ ಮಾಡಿ ಅಂಗಡಿ ಬಂದ್ ಮಾಡಿಸಿದರೆ ಆರ್ಥಿಕ ಹೊಡೆತ ಬಿದ್ದು ಬದುಕು ದುಸ್ತರವಾಗಲಿದೆ ಎಂದು ಗಾಂಧಿ ಬಜಾರ್ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.