ಕುವೆಂಪು ವಿವಿ ಕುಲಪತಿ ಸಮ್ಮುಖದಲ್ಲಿ ಅಳಲು ತೋಡಿಕೊಂಡ ಮೂರು ಕಾಲೇಜಿನ ಸಿಬ್ಬಂದಿ ವರ್ಗ
ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಸಾಯಿ ಹಾಗೂ ಖೇಲೊ ಇಂಡಿಯಾ ಯೋಜನೆಯಡಿಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಆರಂಭಿಸುವುದನ್ನು ಮೂರು ಕಾಲೇಜಿನ ಅದ್ಯಾಪಕರು ಮತ್ತು ಅಧ್ಯಾಪಕೇತರ ವರ್ಗ ಒಕ್ಕೊರಲಿನಿಂದ ವಿರೋಧಿಸಿದೆ.
ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ ಅವರ ಸಮ್ಮುಖದಲ್ಲಿ ಆತಂಕ ತೋಡಿಕೊಂಡ ಅಧ್ಯಾಪಕ ವರ್ಗ, ಯಾವ ಕಾರಣಕ್ಕೆ ಕ್ಯಾಂಪಸ್ ಹಸ್ತಾಂತರ ಬೇಡ ಎಂಬುದನ್ನು ಸವಿವರವಾಗಿ ಬಿಚ್ಚಿಟ್ಟರು. ಪಶುವೈದ್ಯಕಾಲೇಜು, ಕೃಷಿ ವಿವಿ ಕ್ಯಾಂಪಸ್‌ನವರು ಉದ್ದೇಶಿತ ತರಬೇತಿ ಕೇಂದ್ರವನ್ನು ವಿರೋಧಿಸಿದ್ದಾರೆ. ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗದ ಕ್ರೀಡಾ ಕೇಂದ್ರ ಯಾವ ಸೌಭಾಗ್ಯಕ್ಕೆ ಬೇಕು. ಭೂಮಿಯನ್ನು ಖೇಲೋ ಇಂಡಿಯಾ ಯೋಜನೆ ಅಡಿ ಹಸ್ತಾಂತರಿಸಿದರೆ, ಖಂಡಿತಾ ಅದು ನಿರ್ಬಂದಿತ ಏರಿಯಾ ಆಗುತ್ತದೆ ಎಂದು ಕಳವಳ ವ್ಯಕ್ತಮಾಡಿದ್ದರೆ. ಕಾಲೇಜಿನ ಡಾ. ಮಲ್ಲಿಕಾರ್ಜುನ ಮೇಟಿ, ಪ್ರೊ.ಹಾಲಮ್ಮ, ಡಾ.ಮೋಹನ್ ಎಚ್.ಎಸ್., ಪ್ರಕಾಶ್ .ಅವಿನಾಶ್ ಮೊದಲಾದವರು ಅಧ್ಯಾಪಕರ ಪರವಾಗಿ ಮಾತನಾಡಿದರು.
ಸಭೆ ಉದ್ದೇಶಿಸಿ ಮಾತನಾಡಿದ ಕುಲಪತಿ ಪ್ರೊ.ವೀರಭದ್ರಪ್ಪ ಅವರು, ಆರು ಇಲಾಖೆಗಳ ಅನುದಾನದಿಂದ ಈ ಕ್ರೀಡಾಕೇಂದ್ರ ಸ್ಥಾಪಿಸಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಜಮೀನು ಹಸ್ತಾಂತರ ಮಾಡಲು ಪೂರ್ವ ನಿರ್ಧಾರ ಮಾಡಿಕೊಂಡು ಬಂದಂತೆ ಮಾತನಾಡಿದರು ಎನ್ನಲಾಗಿದೆ. ಸಂಸದರು ಇಲ್ಲಿಯೇ ಮಾಡಬೇಕೆಂದು ಹೇಳಿದ್ದಾರೆ ಎಂದು ಒಮ್ಮೆ ಹೇಳಿದರೆ, ನಾವೇ ಇಲ್ಲಿ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದು ಮತ್ತೊಮ್ಮೆ ಹೇಳಿದರು. ಬೇಡ ಎಂದರೆ ಸಂಸದರು ಯೋಜನೆಯನ್ನು ಬೇರೆಡೆಗೆ ಕೊಂಡೊಯ್ಯಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮಗದೊಮ್ಮೆ ಹೇಳಿದರು. ಮೂರು ಕಾಲೇಜಿನ ಸಿಬ್ಬಂದಿಗಳನ್ನು ಮನವೊಲಿಸಲು ಬಂದಂತೆ ಕಂಡ ಕುಲಪತಿಯವರಿಲ್ಲಿ ಯಾವುದೇ ಸ್ಪಷ್ಟತೆ ಇರದೆ ಬಾಹ್ಯ ಒತ್ತಡಕ್ಕೊಳಗಾದವರಂತೆ ಕಂಡರು ಎಂದು ಪ್ರತ್ಯಕ್ಷ ದರ್ಶಿ ಮೂಲಗಳು ತಿಳಿಸಿವೆ.
ಕುಲಸಚಿವ ಎಸ್.ಎಸ್.ಪಾಟೀಲ್, ಪ್ರಾಚಾರ್ಯರಾದ ಡಾ. ವಾಗ್ದೇವಿ, ಎಂ.ಕೆ.ವೀಣಾ, ಪ್ರೊ.ದನಂಜಯ ಸಭೆಯಲ್ಲಿ ಇದ್ದರು.
ಬೆಂಕಿ ಹಚ್ಚಿದ ವಿಸಿ
ಕಾಲೇಜಿನ ಅಭಿವೃದ್ಧಿಯ ದೃಷ್ಟಿಯಿಂದ ಕ್ರೀಡಾ ಯೋಜನೆ ರೂಪಿಸಲಾಗಿದೆ. ನಿಮ್ಮ ಕುಮ್ಮಕ್ಕಿನಿಂದಾಗಿ ಹೊರಗಡೆ ವಿರೋಧ ವ್ಯಕ್ತವಾಗಿದೆ. ಹೋರಾಟಗಾರರ ಮೂಲಕ ನೀವೇ ಬೆಂಕಿ ಹಂಚುತ್ತಿದ್ದೀರಿ.ನನಗೆ ವಿದೇಶಗಳಿಂದಲೂ ಕರೆ ಬರುತ್ತಿವೆ. ಕಾಲೇಜು ಆಸ್ತಿ ಮಾರುತ್ತಿದ್ದೇನೇನೊ ಎಂಬ ಅಪವಾದ ಬರುವಂತಾಗಿದೆ ಎಂದು ಸಭೆ ಉದ್ದೇಶಿಸಿ ಹೇಳಿದ ಕುಲಪತಿಯನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಯಿತು. ನಮಗೆ ಕಾಲೇಜಿನ ಬಗ್ಗೆ ಕಾಳಜಿ ಇರುತ್ತದೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳೊ, ಮಾದ್ಯಮದವರೊ ಯೋಜನೆ ವಿರೋಧಿಸಿದರೆ ನಾವು ಕಟ್ಟಿಹಾಕಲು ಸಾದ್ಯವಿಲ್ಲ ಎಂದು ತಮ್ಮ ಅಸಮಾಧಾನ ತೋಡಿಕೊಂಡರೆನ್ನಾಗಿದೆ.
ಕಾಲೇಜು ಆಸ್ತಿ ಉಳೀ ಬೇಕ್ರಪಾ…
ಮೈಸೂರು ಮಹಾರಾಜರು ಶಿಕ್ಷಣ ನೀಡಬೇಕೆಂಬ ಒಂದೇ ಉದ್ದೇಶದಿಂದ ಸಹ್ಯಾದ್ರಿ ಕಾಲೇಜಿಗೆ ನೂರು ಎಕರೆ ಜಾಗ ಕೊಟ್ಟಿದ್ದರು. ದೂರ ದರ್ಶನ, ಹೈವೆ, ಮ್ಯಾಚ್ ಫ್ಯಾಕ್ಟರಿ, ಹಾಸ್ಟೆಲ್ , ಜೆಡಿ ಆಫೀಸ್ ಹೀಗೆ ಎಲ್ಲ ಜಾಗ ಹರಿದು ಹಂಚಿದೆ. ಈಗ ಮತ್ತೆ ೧೮ ಎಕರೆ ಭೂಮಿ ಕೊಡೋದು ಬ್ಯಾಡ್ರಪಾ..ಭವಿಷ್ಯದ ದೃಷ್ಟಿಯಿಂದ ಜಾಗ ಕಾಲೇಜಿಗೇ ಉಳೀ ಬೇಕ್ರಪಾ…….ಹೀಗೆಂದು ಹೇಳಿದವರು ಸಹ್ಯಾದ್ರಿ ಕಲಾ ಕಾಲೇಜು ವಿಶ್ರಾಂತ ಪ್ರಾಚಾರ್ಯ ಡಾ.ಆರ್.ಆರ್.ಕುಲಕರ್ಣಿ ಅವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ನೋಡಿ ಮಲೆನಾಡು ಮಿರರ್ ಗೆ ದೂರವಾಣಿ ಕರೆ ಮಾಡಿ ತಮ್ಮ ಕಳವಳ ತೋಡಿಕೊಂಡರು.
ಹನ್ನೆರಡು ವರ್ಷ ಅಲ್ಲಿ ಕೆಲಸ ಮಾಡಿದ್ದೇನೆ. ಕ್ರೀಡಾ ತರಬೇತಿ ಕೇಂದ್ರಕ್ಕೆ ಶಿವಮೊಗ್ಗ ಹೊರವಲಯದಲ್ಲಿ ಎಲ್ಲಾದರೂ ಜಾಗ ಕೊಡಲಿ. ಕಟ್ಟಡಗಳ ಕ್ರೀಡಾ ಸಂಕಿರಣ ಮಾಡಿದರೆ ಅಲ್ಲಿನ ಸಹಜ ವಾತಾವರಣ ಇಲ್ಲವಾಗುತ್ತದೆ. ಅಲ್ಲಿ ಅಭ್ಯಾಸ ಮತ್ತು ಬೋಧನೆ ಮಾಡೋದೆ ಒಂದು ಪುಣ್ಯದ ಸಮಯ. ಶಿವಮೊಗ್ಗದ ಜನಪ್ರತಿನಿಧಿಗಳು ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕ್ಯಾಂಪಸ್ ಭೂಮಿ ಅನ್ಯರ ಪಾಲಾಗುವುದನ್ನು ತಪ್ಪಿಸಬೇಕು ಎಂದು ಕಾಲೇಜಿನ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಮಾಡಿದರು.