ಲಾಕ್ ಡೌನ್ ಜೊತೆ ಜೊತೆಗೆ ಬಡವರ, ಶ್ರಮಿಕರ, ಬದುಕು ಕೂಡ ಮೂರಾಬಟ್ಟೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಕೂಡಲೇ ಇವರ ನೆರವಿಗೆ ಧಾವಿಸಬೇಕು ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಆಗ್ರಹಿಸಿದ್ದಾರೆ.
ಆ ದಿನ ದುಡಿಮೆ ಮಾಡಿ ಅದೇ ದಿನ ಊಟ ಮಾಡುವ ಲಕ್ಷಾಂತರ ಶ್ರಮಿಕರು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಬೆಳಗ್ಗೆ 6 ರಿಂದ 10 ರ ವರೆಗೆ ಕೊಳ್ಳುವವರಿಗೆ ಮಾತ್ರ ಅವಕಾಶವಿದೆ. ಆದರೆ, ದುಡಿಯುವ ಜನರಿಗೆ ಈ ಅವಕಾಶ ಎಲ್ಲಿದೆ? ಹಾಗಾಗಿ ಅವರ ಬದುಕು ನಿಜಕ್ಕೂ ಭಾರವಾಗುತ್ತಿದೆ.
ಮೊದಲು ಜೀವ ಮುಖ್ಯ. ಆಮೇಲೆ ಜೀವನ ಎನ್ನುವ ಮಾತನ್ನು ಒಪ್ಪಿಕೊಳ್ಳಬೇಕು ನಿಜ. ಆದರೆ, ಜೀವವನ್ನು ಉಳಿಸಲು ಹೆಣಗಾಡುತ್ತಿರುವ ಸರ್ಕಾರ ಅವರ ಜೀವನವನ್ನೂ ಉಳಿಸುವತ್ತ ಯೋಚಿಸಬೇಕಾಗಿದೆ. ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಳ್ಳುತ್ತಿರುವ ಶ್ರಮಿಕರಿಗೆ ನೆರವು ನೀಡಲು ಈಗಲೇ ಯೋಜನೆ ರೂಪಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಇಂತಹ ಪರಿಸ್ಥಿತಿ ಬರಲು ಸರ್ಕಾರವೇ ನೇರ ಕಾರಣವಾಗಿದೆ. ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದರೆ ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ. ಈಗ ತನ್ನ ಅಸಹಾಯಕತೆಯನ್ನು ಸರ್ಕಾರ ತೋರಿಸುತ್ತಿದೆ. ಕೆಲವರಿಗೆ ಕೆಟ್ಟ ಮೇಲಾದರೂ ಬುದ್ಧಿ ಬರುತ್ತದೆ. ಆದರೆ, ಈ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಕೆಟ್ಟ ಮೇಲೆಯೂ ಬುದ್ಧಿ ಬಂದಂತೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರ ಮತ್ತು ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕೋವಿಡ್ ತಡೆಯಲು ಅಗತ್ಯಕ್ರಮ ಕೈಗೊಳ್ಳಬೇಕು. ಮೆಗ್ಗಾನ್ ಆಸ್ಪತ್ರೆಗೆ ಸದ್ಯಕ್ಕೆ ಒಳ್ಳೆಯ ಹೆಸರಿದೆ. ಅದನ್ನು ಉಳಿಸಿಕೊಳ್ಳಬೇಕು. ಆಮ್ಲಜನಕ ಸೇರಿದಂತೆ ಔಷಧಗಳ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಅತಿ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತರು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಎಲ್ಲೆಲ್ಲಿ ಸರ್ಕಾರದ ಕಟ್ಟಡಗಳು ಖಾಲಿ ಇವೆಯೋ ಅಲ್ಲಲ್ಲಿ ಕೋವಿಡ್ ಚಿಕಿತ್ಸೆಗೆ ಅವಕಾಶ ನೀಡಬೇಕಾಗಿದೆ. ಅದಕ್ಕಾಗಿ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಹಿಂದಿನಂತೆ ಕೆಲವು ಖಾಸಗಿ ಹೋಟೆಲ್ ಗಳನ್ನು ಕೂಡ ಕ್ವಾರಂಟೈನ್ ಗಾಗಿ ಬಳಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕ್ಷಣದಿಂದ ದುಡಿಯುವ ಕ್ಷೇತ್ರದ ಜನ ಅಕ್ಷರಶಃ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಅವರಿಗೆ ಸಹಾಯ ಹಸ್ತ ಚಾಚಲಿ. ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿತಗೊಳಿಸಿದ್ದ ಅಕ್ಕಿಯನ್ನು ಕೊಡಬೇಕು. ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ಅಕ್ಕಿ ವಿತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.