ಸರಕಾರದ ಸವಲತ್ತುಗಳನ್ನು ನಮಗೂ ನೀಡಿ, ಆರೋಗ್ಯ ಇಲಾಖೆಗೆ ಸಂಬಂಧಿತ ಎಲ್ಲಾ ಸೌಕರ್ಯಗಳಲ್ಲಿ ಸಾಗರ, ಸೊರಬ, ಶಿಕಾರಿಪುರಕ್ಕೆ ಸಿಂಹಪಾಲು ನೀಡುತ್ತಾ ಇದ್ದೀರಿ. ನಮಗೂ ಹೆಚ್ಚು ಆರೋಗ್ಯ ಸವಲತ್ತು ನೀಡಿ ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರು ಸಚಿವ ಈಶ್ವರಪ್ಪರಲ್ಲಿ ಮನವಿ ಮಾಡಿದರು.
ಭದ್ರಾವತಿ ಸಿದ್ದಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕೋವಿಡ್-19 ಮುಂಜಾಗ್ರತಾ ಕ್ರಮ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರ ಮತ್ತು ಗ್ರಾಮಾಂತರ ಹೊಳೆಹೊನ್ನೂರು ಸೇರಿ 4 ಲಕ್ಷ ಜನ ಸಂಖ್ಯೆಯಿರುವ ಜಿಲ್ಲೆಯ ದೊಡ್ಡ ತಾಲೂಕು ಆಸ್ಪತ್ರೆಯನ್ನು 150 ಬೆಡ್ ಆಸ್ಪತ್ರೆಯನ್ನಾಗಿಸಬೇಕು, ಆಕ್ಸಿಜನ್ ಉತ್ಪಾದನಾ ಪ್ಲಾಂಟ್ ಮಾಡಿಕೊಡಬೇಕು, ಕೋವಿಡ್ ರೋಗಿಗಳಿಗೆ 50 ಬೆಡ್ ಮೀಸಲಿಡುವಂತೆ ಮಾಡಿಕೊಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು.
ಲಸಿಕೆಗೆ ಸತಾವಣೆ ಬೇಡ
ಆಸ್ಪತ್ರೆಗೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಬರುವವರನ್ನು ಸತಾಯಿಸದೆ ಚುಚ್ಚು ಮದ್ದು ನೀಡಿ. ವೈದ್ಯರು ರೋಗಿಗಳಿಗೆ ನಿಮ್ಮ ಮೊಬೈಲ್ ನಂಬರ್‍ಗಳನ್ನು ಕೊಟ್ಟು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
. ದಿನೇ ದಿನೇ ಕೊರೊನಾ 2 ನೇ ಅಲೆ ಹೆಚ್ಚಾಗುತ್ತಿದೆ. ವೈದ್ಯರು ಕೋವಿಡ್ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ. ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ. ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಆಸ್ಪತ್ರೆಯಲ್ಲಿ ರೋಗಿಗಳನ್ನು ಪ್ರೀತಿಯಿಂದ ಕಂಡರೆ ಅದೇ ನಿಜವಾದ ಸೇವೆಯಾಗಿ ರೋಗಿ ಸುಧಾರಿಸಿ ಚೇತರಿಸಿಕೊಳ್ಳುತ್ತಾನೆಂದರು. ಭದ್ರಾವತಿ ಬೀದಿಗಳಲ್ಲಿ ಜನಜಂಗುಳಿ ತಾಂಡವಾಡುತ್ತಿದೆ. ಸಾಮಾಜಿಕ ಅಂತರವೇ ಕಾಣುತ್ತಿಲ್ಲ. ಪೋಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಎಲ್ಲಿದ್ದೀರಿ ಏನೂ ಸುಧಾರಣೆಯಾಗಿಲ್ಲ. ಲಾಕ್‍ಡೌನ್‍ಗೆ ಅರ್ಥವಿಲ್ಲದಂತಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್‍ನಾಯ್ಕ್ ಮಾತನಾಡಿ ನನ್ನ ಕ್ಷೇತ್ರದವರು ಬೆಂಗಳೂರಿಗೆ ಡಯಾಲಿಸಿಸ್‍ಗೆಂದು ಹೋಗಿ ಆಸ್ಪತ್ರೆಯಲ್ಲಿ ಮರಣವಾಗಿದ್ದಾರೆ. ವೈದ್ಯರು ಕೊರೊನಾದಿಂದ ಸಾವನ್ನಪ್ಪಿದ್ದಾರೆಂದು ಮೃತ ದೇಹ ನೀಡುತ್ತಿಲ್ಲ. ಕೊರೊನಾದಿಂದ ಮರಣ ಹೊಂದಿದರೆ ಆ ದೇಹದಲ್ಲಿ ಎಷ್ಟು ಗಂಟೆ ಆ ವೈರಸ್ ಇರುತ್ತದೆ, ಸತ್ತ ದೇಹದಿಂದ ರೋಗ ಹರಡುತ್ತದೆಯೇ, ಅಕಸ್ಮಾತ್ ಕೋವಿಡ್ ಲಕ್ಷಣವಿದ್ದರೆ ಊರಿಗೆ ದೇಹವನ್ನು ತರಲು ಅವಕಾಶ ನೀಡುತ್ತಿಲ್ಲವೆಂದು ವೈದ್ಯರನ್ನು ಪ್ರಶ್ನೆ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್ ಮಾತನಾಡಿ, ತಾಲೂಕು ಆಡಳಿತದ ಅಧಿಕಾರಿಗಳು ಸಿದ್ದಪಡಿಸಿಕೊಂಡಿದ್ದ ಮಾಹಿತಿ ಆಧರಿಸಿ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಪಡೆದು ಕೆಲವು ಮಾರ್ಪಾಟುಗಳನ್ನು ಮಾಡಿದರು. ತಾಲೂಕು ಸಾರ್ವಜನಿಕ ದೊಡ್ಡಾಸ್ಪತ್ರೆಯಲ್ಲಿ 50 ಕೋವಿಡ್ ಆಕ್ಸಿಜನ್ ಹಾಸಿಗೆಯನ್ನು ಸೋಮವಾರದಿಂದ ಕಾರ್ಯಗತ ಮಾಡಿರಿ, ವಿಐಎಸ್‍ಎಲ್ ಆಸ್ಪತ್ರೆಯಲ್ಲು ಚಿಕಿತ್ಸೆಯನ್ನು ಆರಂಭಿಸಿ, ಕೂಡಲೆ ಆಂಬುಲೆನ್ಸ್ ದುರಸ್ಥಿ ಮಾಡಿಸಿ, ಹಣ ಕೊರತೆಗೆ ಅಂಜಬೇಕಿಲ್ಲ. ಯಾವುದೆ ಕೊರತೆ ಇದ್ದರೂ ಕೂಡಲೆ ಗಮನಕ್ಕೆ ತನ್ನಿ. ಹೋಮ್ ಐಸೋಲೇಷನ್ ನಲ್ಲಿದ್ದವರ ಮೇಲೆ ತೀವ್ರ ನಿಗಾ ಇಡಬೇಕು ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್, ಮುಖ್ಯವೈದ್ಯಾಧಿಕಾರಿ ಡಾ.ಓ.ಮಲ್ಲಪ್ಪ, ನಗರಸಭೆ ಪೌರಾಯುಕ್ತ ಮನೋಹರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಸೋಮಶೇಖರಪ್ಪ ,ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ತಾಪಂ ಅಧ್ಯಕ್ಷೆ ಲಕ್ಷೀದೇವಿ, ಸಿಇಓ ವೈಶಾಲಿ, ಉಪವಿಭಾಗಾಧಿಕಾರಿ ಡಾ.ಟಿ.ವಿ.ಪ್ರಕಾಶ್, ಡಿವೈಎಸ್‍ಪಿ ಕೃಷ್ಣಮೂರ್ತಿ, ಸರ್ಕಲ್ ಇನ್ಸ್‍ಪೆಕ್ಟರ್ ರಾಘವೇಂದ್ರ ಕಾಂಡಿಕೆ, ಸಮಾಜಕಲ್ಯಾಣಾಧಿಕಾರಿ ಎನ್.ಕೃಷ್ಣಪ್ಪ ಮತ್ತಿತರರಿದ್ದರು.