ಕೋವಿಡ್ – 19 ಸಾಂಕ್ರಾಮಿಕವನ್ನು ನಿಗ್ರಹಿಸಲು ಲಾಕ್ ಡೌನ್ ಘೋಷಿಸಿದ್ದು ವಾಹನ ಓಡಾಟವನ್ನು ನಿರ್ಬಂಧಿಸಲಾಗಿದೆ.ಅಗತ್ಯವಸ್ತುಗಳ ಖರೀದಿಗೆ ಜನರಿಗೆ ಯಾವುದೇ ಪರ್ಯಾಯ ಕಲ್ಪ್ಪಿಸದೇ ವಾಹನ ಓಡಾಟ ನಿರ್ಬಂಧಿಸಿರುವುದು ಅವೈಜ್ಞಾನಿಕವಾದ ಜನವಿರೋಧಿ ಕೆಲಸವಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನಕುಮಾರ್ ಅಭಿಪ್ರಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಜನರ ಓಡಾಟ ನಿರ್ಬಂಧಿಸದೆ ಈ ಸಾಂಕ್ರಾಮಿಕವನ್ನು ತಡೆಗಟ್ಟುವುದು ಅಸಾಧ್ಯ ಎಂಬುದು ಸತ್ಯ. ಹಾಗೆಯೇ ಪೊಲೀಸ್ ವ್ಯವಸ್ಥೆ ಹಗಲು ರಾತ್ರಿ ಜನರ ಆರೋಗ್ಯದ ಕಾರಣಕ್ಕಾಗಿ ಕಾಳಜಿ ವಹಿಸುತ್ತಿದೆ ಎಂಬುದು ಪ್ರಶಂಸನೀಯ.ಆದರೆ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸುವಂತಿಲ್ಲ ಎಂಬ ನಿಯಮ ಜನರಿಗೆ ತೀವ್ರ ತೊಂದರೆ ನೀಡಲಿದ್ದು, ಜನರಲ್ಲಿ ಹುಟ್ಟುವ ಆಕ್ರೋಶ ಪೊಲೀಸರ ಕೆಲಸಕ್ಕೆ ತೊಡಕಾಗುವ ಸಾಧ್ಯತೆಯೂ ಇವೆ.
ತಿಂಗಳಿಗಾಗುವಷ್ಟು ದಿನಸಿ ತಂದಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲದ ಬಡ ಕುಟುಂಬಗಳು ದಿನವೂ ಅಂಗಡಿ ಬಾಗಿಲಿಗೆ ಹೋಗಬೇಕಾಗುತ್ತದೆ.ಔಷಧಿ ತರಲು,ಆಸ್ಪತ್ರೆಗೆ ಹೋಗಿಬರಲು, ವ್ಯಾಕ್ಸಿನ್ ಹಾಕಿಸಿಕೊಳ್ಳಲು,ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟ ,ಔಷಧ ಕೊಟ್ಟುಬರಲು ವಾಹನದಲ್ಲಿ ಓಡಾಟ ಅನಿವಾರ್ಯವಾಗಲಿದೆ.
ಈ ನಿಟ್ಟಿನಲ್ಲಿ ಕಾರಣವಿದ್ದು ವಾಹನದಲ್ಲಿ ಓಡಾಡುವವರಿಗೆ ಅವಕಾಶ ನೀಡಬೇಕು ಮತ್ತು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮಹಿಳೆಯರು,ವೃದ್ಧರಿಗೆ ಓಡಾಡಲು ಆಟೋಗಳಿಗೆ ಅವಕಾಶ ನೀಡಬೇಕೆಂದು ಪ್ರಸನ್ನಕುಮಾರ್ ವಿನಂತಿಸಿದ್ದಾರೆ.