ರಾಜ್ಯ ಕೊರೊನದಿಂದ ನಲುಗಿ ಹೋಗಿದೆ. ಒಂದು ಕಡೆ ಆಕ್ಸಿಜನ್ ಇಲ್ಲದೆ ಜನ ಸಾಯ್ತಿದಾರೆ, ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ. ಶಿಕ್ಷಣ ವ್ಯವಸ್ಥೆಯಂತೂ ಸ್ಥಬ್ಧವಾಗಿದೆ. ಯೂನಿವರ್ಸಿಟಿ ಪರೀಕ್ಷೆಗಳೂ ಮುಂದೆ ಹೋಗಿವೆ. ಆದರೆ ಇಂತಹ ಕೊರೊನ ದುರಿತ ಕಾಲದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕುರ್ಚಿಗಾಗಿ ಖೋಖೋ ಆಟ ನಡೀತಿದೆ.
ಕುವೆಂಪು ವಿವಿ ಕಲಸಚಿವ (ಅಡಳಿತ) ಎಸ್.ಎಸ್.ಪಾಟೀಲ್ ಅವರನ್ನು ಬದಲಾಯಿಸಿ ಸರಕಾರ ಸೋಮವಾರ ಆದೇಶ ಹೊರಡಿಸಿತ್ತು. ನೂತನ ಕುಲಸಚಿವರು ಅಧಿಕಾರ ಮಂಗಳವಾರ ವಹಿಸಿಕೊಳ್ಳುತ್ತಿದ್ದಂತೆಯೇ ಅತ್ತ ಬೆಂಗಳೂರಿನಲ್ಲಿ ಮತ್ತೊಂದು ಆದೇಶ ಹೊರಡಿಸಿರುವ ಸರಕಾರ ಸೋಮವಾರದ ಆದೇಶವನ್ನು ರದ್ದು ಮಾಡಿದೆ. ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಸಿ.ಎನ್. ಶ್ರೀಧರ್ ಅವರನ್ನು ರಾಜ್ಯಪಾಲರ ಆದೇಶಾನುಸಾರ ಕುಲಸಚಿವ ಹುದ್ದೆಗೆ ನೇಮಿಸಿದ್ದರೆ, ಅವರು ಅಧಿಕಾರ ವಹಿಸಿಕೊಂಡ ಮರುಕ್ಷಣವೇ ರದ್ದಾಗಿರುವುದು ವಿವಿಯಲ್ಲಿರುವ ಜಾತಿ ಮತ್ತು ಬಣಜಗಳಕ್ಕೆ ಮತ್ತೊಂದು ವಸ್ತು ಸಿಕ್ಕಂತಾಗಿದೆ. ಈಗಾಗಲೇ ಅಧಿಕಾರ ಸ್ವೀಕರಿಸಿರುವ ಶ್ರೀಧರ್ ಮುಂದೇನು ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಪಾಲರ ಆದೇಶದ ಅನ್ವಯ ಕುಲಸಚಿವ ಎಸ್.ಎಸ್.ಪಾಟೀಲ್ ಜಾಗಕ್ಕೆ ಹಿರಿಯ ಶ್ರೇಣಿ ಕೆ.ಎ.ಎಸ್ ಅಧಿಕಾರಿ ಸಿ.ಎನ್.ಶ್ರೀಧರ್ ಅವರನ್ನು ನೇಮಕ ಮಾಡಿ ವರ್ಗಾವಣೆ ಮಾಡಲಾಗಿತ್ತು. ತಕ್ಷಣ ಎಚ್ಚೆತ್ತ ಇನ್ನೊಂದು ಬಣ ರಾಜಕೀಯ ಲಾಬಿ ಮಾಡಿ ಪಾಟೀಲ್ ಅವರ ವರ್ಗಾವಣೆಯನ್ನು ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಬಣರಾಜಕೀಯ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೊದಲಿಂದಲೂ ಬಣ ರಾಜಕೀಯ ಇತ್ತು. ಆದರೆ ಪ್ರೊ.ವೀರಭದ್ರಪ್ಪ ಅವರು ಕುಲಪತಿಯಾಗಿ ಬಂದ ಬಳಿಕ ಆರಂಭದಲ್ಲಿ ಕುಲಸಚಿವ ಹಾಗೂ ಅವರ ಮಧ್ಯೆ ಉತ್ತಮ ಹೊಂದಾಣಿಕೆ ಇತ್ತು. ಇಬ್ಬರಿಗೂ ಒಂದೇ ರಾಜಕೀಯ ವಲಯವೇ ಗಾಡ್‌ಫಾದರ್ ಆಗಿರುವುದರಿಂದ ಅದು ಅನಿವಾರ್ಯವಾಗಿತ್ತು. ಆದರೆ ಕಾಲಕ್ರಮೇಣ ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿತು. ಇದಕ್ಕೆ ಪೂರಕ ಎಂಬಂತೆ ಒಬ್ಬರ ಮೇಲೊಬ್ಬರೂ ದೂರು ಹೇಳಲಾರಂಭಿಸಿದ್ದರು ಎನ್ನಲಾಗಿದೆ.
ಪ್ರಾಧ್ಯಾಪಕರ ವಿರುದ್ಧ ಎಫ್.ಐ.ಆರ್
ಶೈಕ್ಷಣಿಕ ಚಟುವಟಿಕೆಗಳಿಗೆ ಸೋಂಕು ತಗುಲಿದ್ದರೂ, ಆಡಳಿತಾತ್ಮಕ ಚಟುವಟಿಕೆಗಳು ವಿವಿಯಲ್ಲಿ ನಡೆಯುತ್ತಿದ್ದವು. ಈ ನಡುವೆ ಹೊರಗಿನ ಕೆಲ ಸಂಘಟನೆಗಳನ್ನು ಬಳಸಿಕೊಂಡು ವಿವಿಯಲ್ಲಿ ತಮಗಾಗದವರ ವಿರುದ್ಧ ಪೊಲೀಸ್ ದೂರು ಕೊಡಿಸುವ ಪ್ರಯತ್ನಗಳು ನಡೆದಿದ್ದವು. ಇದನ್ನು ಪ್ರತಿರೋಧಿಸಿದ್ದ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳ ಸಂಘಟನೆ ಕುಲಪತಿಗೆ ದೂರು ನೀಡಿತ್ತು. ಈ ಬೆಳವಣಿಗೆಯ ಹಿಂದೆ ಸ್ಥಳೀಯ ಜನಪ್ರತಿನಿಧಿಗಳ ಬೆಂಬ ಇರುವ ಪ್ರಭಾವಿಗಳೇ ಇದ್ದರು ಎಂಬ ಗುಮಾನಿಯನ್ನು ಅಧ್ಯಾಪಕ ವಲಯ ವ್ಯಕ್ತಮಾಡಿತ್ತು. ಈ ಬೆಳವಣಿಗೆಯ ಬಳಿಕ ಕುಲಪತಿ ಸಿಬ್ಬಂದಿಯ ಪರವಾಗಿ ನಿಂತಿದ್ದರು.
ವಿವಿ ಒಳಗಿನ ದೂರು ಸಂಸದರ ತನಕವೂ ಹೋಗಿ ಅವರು, ಸುಸೂತ್ರವಾಗಿ ಆಡಳಿತ ಸಾಗಬೇಕು. ಶಿಕ್ಷಣ ಸಂಸ್ಥೆಯಲ್ಲಿ ಅನ್ಯ ಸಂಗತಿಗಳು ಬೇಡ ಎಂಬ ಸೂಚನೆಯನ್ನೂ ಕೊಟ್ಟಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ಇದ್ದಕ್ಕಿದ್ದಂತೆ ಕುಲಸಚಿವ ಪಾಟೀಲ್ ಅವರ ವರ್ಗಾವಣೆ ಆದೇಶ ಬಂದಿದೆ. ಈ ವರ್ಗಾವಣೆಯಿಂದ ಪಾಟೀಲ್ ತಮ್ಮ ಪ್ರಭಾವ ಬಳಸಿ ನೂತನ ಕುಲಸಚಿವರ ವರ್ಗಾವಣೆ ಆದೇಶ ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಟೀಲ್ ಅವರನ್ನು ಎತ್ತಂಗಡಿ ಮಾಡಿಸಿದ್ದು ಯಾರು? ಮತ್ತೆ ಅದನ್ನು ರದ್ದು ಮಾಡಿದ್ದು ಯಾರು? ಎಂಬ ಪ್ರಶ್ನೆಗಳು ಮಾತ್ರ ವಿವಿ ಬೆಟ್ಟದ ಮೇಲಿಂದ ಬೀಸುವ ಗಾಳಿಯಂತೆ ತೇಲಾಡುತ್ತಿವೆ. ಊರೆಲ್ಲ ಕೊರೋನ ಆತಂಕವಿದೆ. ವಿದ್ಯಾರ್ಥಿಗಳು ಮುಂದೆ ನಮ್ಮ ಶಿಕ್ಷಣದ ಕತೆ ಏನು ಎಂಬ ಚಿಂತೆಯಲ್ಲಿರುವಾಗ ವಿವಿಯ ಕುರ್ಚಿಕಾಳಗ ಮಾತ್ರ ಟೀಕೆಗೊಳಗಾಗಿದೆ.