ಶಿವಮೊಗ್ಗ ನಗರದಲ್ಲಿ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸಂಜೆಯಿಂದ ಆರಂಭವಾದ ಗುಡುಗು ಸಿಡಿಲಿನ ಮಳೆ ಎರಡು ಹಂತದಲ್ಲಿ ಸುರಿಯಿತು.
ಶಿವಮೊಗ್ಗ ನಗರದ ಬಾಪೂಜಿನಗರ, ಗಾಂಧಿನಗರ,ಗೋಪಾಲಗೌಡ ಬಡಾವಣೆ, ವೆಂಕಟೇಶ್ ನಗರದ ಅನೇಕ ತಗ್ಗು ಪ್ರದೇಶಗಳಲ್ಲಿ ಮಳೆಯಿಂದಾಗಿ ಚರಂಡಿ ನೀರು ಸೇರಿ ಮನೆಗಳಿಗೆ ನುಗ್ಗಿದೆ. ಜಯನಗರದ ರಾಜಾಕಾಲುವೆಯಿಂದ ನುಗ್ಗಿದ ನೀರು ಮನೆಗಳಿಗೆ ಕೊಳಚೆಯನ್ನೂ ತಂದು ಹಾಕಿ ಜನರಿಗೆ ತೀವ್ರ ತೊಂದರೆಯಾಯಿತು.
ಸ್ಮಾರ್ಟ್‍ಸಿಟಿ ಕಾಮಗಾರಿ ಪ್ರಗತಿಯಲ್ಲಿರುವ ಕಡೆಗಳಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕಂಡು ಬಂದಿತು. ಲಾಕ್‍ಡೌನ್ ನಿಮಿತ್ತ ಅನೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಮಳೆಯಿಂದಾಗಿ ನೀರು ತುಂಬಿದ ರಸ್ತೆಯಲ್ಲಿ ದ್ವಿಚಕ್ರವಾಹನಗಳನ್ನು ಚಲಾಯಿಸಲು ತೊಂದರೆ ಉಂಟಾಗಿತ್ತು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೊರೊನ ವಾರಿಯರ್ಸ್‍ಗಳಾದ ಆರೋಗ್ಯ ಕಾರ್ಯಕರ್ತರಿಗೆ ತೊಂದರೆಯಾಯಿತು.