Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಬಿಗಿ ಲಾಕ್‍ಡೌನ್ ಮುಂದುವರಿಕೆ: ಕೆ.ಎಸ್.ಈಶ್ವರಪ್ಪ

ಮೂರನೇ ಅಲೆ ಎದುರಿಸಲು ಸಿದ್ಧತೆ

ಶಿವಮೊಗ್ಗ ನಗರದಲ್ಲಿ ಕಳೆದ ವಾರ ನಾಲ್ಕು ದಿನಗಳ ಕಾಲ ಜಾರಿಗೊಳಿಸಲಾಗಿದ್ದ ಬಿಗಿ ಲಾಕ್‍ಡೌನ್ ಭಾನುವಾರದ ತನಕ ಮುಂದುವರೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

ಕಳೆದ ವಾರದ ಲಾಕ್‍ಡೌನ್ ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ಹರಡುವಿಕೆ ಪ್ರಮಾಣ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದು, ಎಲ್ಲರ ಅಭಿಪ್ರಾಯದಂತೆ ಇದನ್ನು ಒಂದು ವಾರ ಕಾಲ ಮುಂದುವರೆಸಲಾಗುವುದು. ಆದರೆ ಈ ಬಾರಿ ಎಪಿಎಂಸಿ ಮಾರುಕಟ್ಟೆ ಬೆಳಿಗ್ಗೆ 7ಗಂಟೆಯವರೆಗೆ ಹಾಗೂ ಸಗಟು ದಿನಸಿ ವ್ಯಾಪಾರಕ್ಕೆ ಬೆಳಿಗ್ಗೆ 9ಗಂಟೆಯವರೆಗೆ ಅವಕಾಶ ನೀಡಲಾಗುವುದು. ಇನ್ನುಳಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಅವಶ್ಯಕ ವಸ್ತುಗಳು ಹಾಗೂ ಕೈಗಾರಿಕೆಗಳಿಗೆ ಅನುಮತಿಯನ್ನು ನೀಡಲಾಗಿದೆ ಎಂದು ಹೇಳಿದರು.

ಮೂರನೇ ಅಲೆ ಎದುರಿಸಲು ಸಿದ್ಧತೆ: ತಜ್ಞರು ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಮೂರನೇ ಅಲೆ ಬರುವ ಬಗ್ಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರ ಸಂಬಂಧಿಕರಿಗೆ ಯಾವುದೇ ಕಾರಣಕ್ಕೂ ವಾರ್ಡ್ ಒಳಗೆ ಪ್ರವೇಶಿಸಲು ಅವಕಾಶ ನೀಡಬಾರದು. ಕೋವಿಡ್ ಪೀಡಿತರ ಅಗತ್ಯಗಳನ್ನು ನೋಡಿಕೊಳ್ಳಲು ಬೇಕಾದ ಸಿಬ್ಬಂದಿಗಳನ್ನು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಲಸಿಕೆ ತೀವ್ರಗೊಳಿಸಬೇಕು

ಜಿಲ್ಲಾ ಕೋವಿಡ್ ನಿರ್ವಹಣಾ ತಜ್ಞ ಸಮಿತಿಯ ಸದಸ್ಯ ಡಾ.ಶ್ರೀಕಾಂತ್ ಹೆಗಡೆ ಅವರು ಮಾತನಾಡಿ, ಮೂರನೇ ಅಲೆಯನ್ನು ತಡೆಯಲು ಲಸಿಕೆ ನೀಡುವುದನ್ನು ತೀವ್ರಗೊಳಿಸುವುದು ಮಾತ್ರ ಏಕೈಕ ಮಾರ್ಗವಾಗಿದೆ. ಮೂರನೇ ಅಲೆ ತಾಲೂಕು ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಉತ್ತಮಪಡಿಸಬೇಕು. ಅಗತ್ಯ ಪ್ರಮಾಣದ ವೈದ್ಯರು, ನರ್ಸ್, ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಲಸಿಕೆ ನೀಡುವ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ಹೇಳಿದರು.

ಇನ್ನೋರ್ವ ಸದಸ್ಯ ಧನಂಜಯ ಸರ್ಜಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಆದಷ್ಟು ಬೇಗನೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಬಿಗಿಗೊಳಿಸಬೇಕು ಎಂದರು.

ಸಮನ್ವಯತೆಯ ಅಗತ್ಯವಿದೆ

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರು ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಮನ್ವಯತೆಯ ಅಗತ್ಯವಿದೆ. ಕೇವಲ ಅರ್‍ಟಿಪಿಸಿಆರ್ ಪಾಸಿಟಿವ್ ವ್ಯಕ್ತಿಗಳನ್ನು ಮಾತ್ರವಲ್ಲದೆ, ಎದೆ ಸ್ಕ್ಯಾನಿಂಗ್‍ನಲ್ಲಿ ರೋಗ ಲಕ್ಷಣ ಕಂಡು ಬಂದವರನ್ನು ಸಹ ಕರೋನಾ ಪಾಸಿಟಿವ್ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಮೃತರ ಆಡಿಟ್ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಮೆಗ್ಗಾನ್‍ನಲ್ಲಿ ಮೃತರನ್ನು ಕೊಂಡೊಯ್ಯಲು ಅಂಬುಲೆನ್ಸ್‍ಗಳಿಗೆ ಈಗಾಗಲೇ ದರ ನಿಗದಿಪಡಿಸಲಾಗಿದೆ. ಇದರ ಪಟ್ಟಿಯನ್ನು ಮೆಗ್ಗಾನ್‍ನಲ್ಲಿ ಪ್ರಕಟಿಸಲಾಗುವುದು. ಇದಕ್ಕಿಂತ ಹೆಚ್ಚಿನ ದರವನ್ನು ಪಡೆಯುವಂತಿಲ್ಲ. ರೆಮಿಡೆಸ್ವಿಯರ್ ದುರ್ಬಳಕೆ ಕುರಿತಾಗಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನ ಕುಮಾರ್, ರುದ್ರೇಗೌಡ, ಎಸ್ಪಿ ಲಕ್ಷ್ಮೀ ಪ್ರಸಾದ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ಈಶ್ವರಪ್ಪ ಅವರು ಶುಭಮಂಗಳ ಕಲ್ಯಾಣ ಮಂಟಪದಲ್ಲಿನ ಕೋವಿಡ್ ಸೆಂಟರ್ ವೀಕ್ಷಿಸಿದರು.ಕೆ.ಇ.ಕಾಂತೇಶ್ ಇದ್ದರು
Ad Widget

Related posts

ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನ ಪರ ಎಂದ ಈಶ್ವರಪ್ಪ

Malenadu Mirror Desk

ಇತಿಹಾಸ ತಜ್ಞಖಂಡೋಬರಾವ್ ಅವರಿಗೆ ನಾಗರೀಕ ಸನ್ಮಾನ

Malenadu Mirror Desk

ಕೇಂದ್ರ,ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.