ಶಿವಮೊಗ್ಗದ ಹೆಸರಾಂತ ಮೂಳೆ ತಜ್ಞ ಡಾ.ಬಿ.ಈಶ್ವರಪ್ಪ ಅವರು ಕೊರೊನ ಸೋಂಕಿನಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಮೂಲತಃ ಸೊರಬ ತಾಲೂಕಿನವರಾದ ಈಶ್ವರಪ್ಪ ಬಡರೋಗಿಗಳಿಗೆ ಆಶ್ರಯದಾತರಾಗಿದ್ದರು. ಮೂಳೆ ತಜ್ಞರಾದರೂ ಅವರ ಬಳಿ ಹಳ್ಳಿಗಾಡಿನ ಜನರು ಸಾಮಾನ್ಯ ಕಾಯಿಲೆಗೂ ಬರುತ್ತಿದ್ದರು. ಸರಕಾರಿ ವೈದ್ಯರಾಗಿ ಹೊನ್ನಾಳಿ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿ ಬಳಿಕ ಶಿವಮೊಗ್ಗ ಲಕ್ಷ್ಮೀಟಾಕೀಸ್ ಸಮೀಪ ಸಾನಿಧ್ಯ ಕ್ಲಿನಿಕ್ ನಡೆಸುತ್ತಿದ್ದರು. ಬಡ ರೋಗಿಗಳು ಕೊಟ್ಟಷ್ಟು ಹಣ ಪಡೆಯುತ್ತಿದ್ದ ಅವರು ರೋಗಿಗಳೊಂದಿಗೆ ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು.
ಸೊರಬ ತಾಲೂಕಿನ ಹಳ್ಳಿಗಳ ಅನೇಕರು ಅವರ ಬಳಿ ಬರುತ್ತಿದ್ದರು. ಸೊರಬ ತಾಲೂಕಿನ ರೋಗಿಗಳು ಬಂದರೆ ತಮ್ಮ ಮನೆಯವರೇ ಬಂದರೇನೊ ಎಂಬುವಷ್ಟರ ಮಟ್ಟಿಗೆ ಮಳೆ-ಬೆಳೆ ಸುದ್ದಿಯಿಂದ ಹಿಡಿದು ಯಾವ ಬಸ್ಸಿಗೆ ಬಂದೆ ಎಂದು ವಿಚಾರಿಸುತ್ತಿದ್ದರು. ಕಾಸಿಲ್ಲದವರಿಗೆ ಉಚಿತ ಚಿಕಿತ್ಸೆ ನೀಡುವುದಲ್ಲದೆ, ರಾತ್ರ ಬಸ್ಸಿಗೆ ಹಣಕೊಟ್ಟು ಕಳಿಸಿದ್ದ ಎಷ್ಟೋ ಉದಾಹರಣೆಗಳಿವೆ. ಫಿಜಿಷಿಯನ್ ಡಾ.ಪ್ರೀತಂ ಹಾಗೂ ದಂತವೈದ್ಯ ಡಾ.ಚೇತನ್ ಅವರು ಈಶ್ವರಪ್ಪ ಅವರ ಪುತ್ರರಾಗಿದ್ದಾರೆ.
ಈಶ್ವರಪ್ಪ ಎಂಬ ಬಡವರ ಸಂಜೀವಿನಿ
ಬಡವರ ಬಂಧು. ನಿಜವಾದ ಸಮಾಜ ಸೇವಕ. ಸಹೃದಯಿ. ವೈದ್ಯೋ ನಾರಾಯಣೋ ಹರಿ ಎಂಬ ವಾಕ್ಯಕ್ಕೆ ಅರ್ಥ ಕಲ್ಪಿಸಿದ ವೈದ್ಯ ಮತ್ತು ರೋಗಿಗಳ ಪಾಲಿಗೆ ತಂದೆಯಂತೆ , ಬಂಧುವಂತೆ ನೋಡುತ್ತಿದ್ದ ವಿಶಾಲ ಸಹೃದಯಿ ಡಾಕ್ಟರ್ ಈಶ್ವರಪ್ಪ ಸರ್ ನಿಧನ ವಾರ್ತೆ ಎದೆ ತಟ್ಟಿತು. ಸಂಕಟವಾಯಿತು. ಮನುಷ್ಯ ನನ್ನು ಭಾಧಿಸುವ ಸಕಲ ಕಾಯಿಲೆಗಳಿಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದರು.
ಬಡರೋಗಿಗಳಿಗೆ ಉಚಿತವಾಗಿ ಉಪಚರಿಸಿ ಔಷಧಿಯನ್ನೂ ಉಚಿತವಾಗಿ ಕೊಡುತ್ತಿದ್ದರು. ಎಲ್ಲ ರೋಗಿಗಳ ಜೊತೆ ಸುಖ ಕಷ್ಟ,ಊರುಕೇರಿ ಹೀಗೆ ಕುಶಲೋಪರಿ ವಿಚಾರಿಸಿದ ನಂತರವೇ ನಿಮಗೇನು ಆರೋಗ್ಯ ಸಮಸ್ಯೆ ಎಂದು ಕೇಳುತ್ತಿದ್ದರು. ದಿವಂಗತ ಮಾಜಿ. ಸಿ. ಎಮ್. ಬಂಗಾರಪ್ಪ ನವರ ಖಾಸಾ ಸ್ನೇಹಿತ ರಾಗಿದ್ದ ಅವರು ಬಂಗಾರಪ್ಪ ನವರು ಬಡವರ ಬಗ್ಗೆ ಹೊಂದಿದ್ದ ಕಾಳಜಿಯನ್ನು ಹೊಂದಿದ್ದರು. ಸೇವೆ ಸಲ್ಲಿಸಿದ್ದ ಊರಿನ ಮೇಲೆ ಅತೀವ ಪ್ರೀತಿ ಹೊಂದಿದ್ದ ಇವರು ಸೊರಬ, ಸಾಗರ, ಆನವಟ್ಟಿ ಮುಂತಾದ ಭಾಗದ ಜನರು ಇವರ ಕ್ಲಿನಿಕ್‍ಗೆ ತಡರಾತ್ರಿ ಬಂದರು ಚಿಕಿತ್ಸೆ ನೀಡಿ ಹೋಗುತ್ತಿದ್ದರು. ಅತಿ ಸಣ್ಣ ಕ್ಲಿನಿಕ್ ನಲ್ಲಿ ಬೆಳಗ್ಗೆಯೇ ಟೋಕನ್ ತಗೊಂಡು ಕಾಯುತ್ತಿದ್ದ ಜನ ಯಾವತ್ತೂ ಬೇಸತ್ತು ಬೇರೆ ವೈದ್ಯರ ಹೋಗುತ್ತಿರಲಿಲ್ಲ. ಅವರ ಚಿಕಿತ್ಸೆ ಹೇಗಿತ್ತು ಎಂದರೆ ಒಳ ರೋಗಿಗಳಿಗೆ ನೀಡುವ ಸಲೈನ್‍ಅನ್ನು ಕಾಲು ಬೆಂಚಿನ ಮೇಲೆ ಮಲಗಿಸಿ ಕೊಡುತ್ತಿದ್ದರು. ಆಕ್ಸಿಡೆಂಟ್ ಆದವರಿಗೂ ಹೊಲಿಗೆ ಹಾಕಿ, ಮಾತ್ರೆ ಕೊಟ್ಟು ಕಳಿಸುತ್ತಿದ್ದರು. ಅವರು ಕೊಡುತ್ತಿದ್ದ ಭರವಸೆ ಮತ್ತು ಸಾಂತ್ವನದ ಮಾತುಗಳನ್ನು ಅವರು ನೀಡುತ್ತಿದ್ದ ಔಷಧಕ್ಕಿಂತ ಹೆಚ್ಚು ಪರಿಣಾಮಕಾರಿ ಆಗಿರುತ್ತಿದ್ದವು. ಆಧುನಿಕ ವೈದ್ಯಕರ್ಣ ಇನ್ನಿಲ್ಲ ಎಂಬುದು ಅಸಂಖ್ಯ ರೋಗಿಗಳ ಪಾಲಿಗೆ ನೋವಿನ ಸಂಗತಿ
- ಸರೋಜಾ. ಪಿ. ಚಂಗೊಳ್ಳಿ, ವಕೀಲರು, ಶಿವಮೊಗ್ಗ