ಕೊರೊನಾ ಹೆಚ್ಚಾಗಲು ಬಿಜೆಪಿಯವರ ಚುನಾವಣಾ ವ್ಯಾಮೋಹವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ದೂರಿದರು.
ಶಿವಮೊಗ್ಗದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ , ಸಿ.ಟಿ. ರವಿ, ಸಂತೋಷ್ ಜಿ. ಮೊದಲಾದ ಬಿಜೆಪಿ ನಾಯಕರು ರಾಜ್ಯದಲ್ಲಿ ಕೊರೊನಾ ಹರಡಲು ಕಾಂಗ್ರೆಸ್ ಕಾರಣ ಎಂಬ ಹೇಳಿಕೆ ನೀಡಿದ್ದಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ? ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನೇ ಗುರಿಯನ್ನಾಗಿಸಿಕೊಂಡು ತಮ್ಮ ಹುಳಕು ಮುಚ್ಚಿಕೊಳ್ಳುತ್ತಿದ್ದಾರೆ.ಎಂದರು.
ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದರೂ , ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ೫ ರಾಜ್ಯಗಳಲ್ಲಿ ಚುನಾವಣೆ ನಡೆಸಿತು. ರಾಜ್ಯದಲ್ಲಿಯೂ ಉಪ ಚುನಾವಣೆ ನಡೆಸಲಾಯಿತು, ಹೀಗೆ ಚುನಾವಣೆ ಮೇಲೆ ಚುನಾವಣೆ ಮಾಡಿ, ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದ್ದು ಬಿಜೆಪಿ ಸರ್ಕಾರ. ಜೊತೆಗೆ ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಿಸುವ ಮುನ್ನ ಬೆಂಗಳೂರಿಂದ ಸುಮಾರು ೧೨ ಸಾವಿರ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಟ್ಟು ಸೋಂಕು ಹರಡಲು ನೇರ ಕಾರಣವಾಗಿದೆ. ಇಷ್ಟೆಲ್ಲಾ ತಪ್ಪನ್ನು ಇಟ್ಟುಕೊಂಡು ಬಿಜೆಪಿ ಸರ್ಕಾರ ಕಾಂಗ್ರೆಸ್ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ ಎಂದರು.
ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ಆಮ್ಲಜನಕ, ವೆಂಟಿಲೇಟಿರ್, ಬೆಡ್‌ಗಳು ಇಲ್ಲ. ಇದರ ನಡುವೆ ಶಿಲೀಂದ್ರ ರೋಗ(ಬ್ಲಾಕ್ ಫಂಗಸ್) ರೋಗವನ್ನು ಕೂಡ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸುಂದರೇಶ್ ದೂರಿದರು.
ಬಿಜೆಪಿ ಆಡಳಿತ ಕುಸಿದಿದೆ
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಈಗಾಗಲೇ ಹೈಕೋರ್ಟ್ ಎರಡೂ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರ ಸಹಕಾರ ನೀಡುವಲ್ಲಿ ಸಂಪೂರ್ಣ ಎಡವಿದೆ. ಕರ್ನಾಟಕದ ಬಿಜೆಪಿ ಸಂಸದರು ಯಾವ ಒತ್ತಡವನ್ನು ಕೇಂದ್ರದ ಮೇಲೆ ಹಾಕಿಲ್ಲ. ರಾಜ್ಯ ಬಿಜೆಪಿ ಸರ್ಕಾರದಲ್ಲಿಯೇ ಪರಸ್ಪರ ಹೊಂದಾಣಿಕೆ ಇಲ್ಲ. ಆರೋಗ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಉಪ ಮುಖ್ಯಮಂತ್ರಿಗಳ ನಡುವೆ ಸಹಮತ ಇಲ್ಲ. ಒಬ್ಬರ ಅಭಿಪ್ರಾಯಗಳು ಮತ್ತೊಬ್ಬರಿಗೆ ಅರ್ಥವಾಗುತ್ತಿಲ್ಲ. ಅವರ ಪಕ್ಷದವರೇ ಅವರ ಕಾರ್ಯವನ್ನು ಟೀಕಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆಡಳಿತ ಕುಸಿದಿದೆ. ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದರೂ ಸುಳ್ಳು ಅಂಕಿ, ಅಂಶಗಳನ್ನು ನೀಡಲಾಗುತ್ತಿದೆ. ಪ್ರತಿದಿನ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳಿಂದ ಮೃತದೇಹಗಳನ್ನು ತೆಗೆದುಕೊಂಡು ಹೋಗುವುದು ಕೂಡ ಕಷ್ಟವಾಗಿದೆ. ಈ ಬಿಜೆಪಿ ಸರ್ಕಾರ ಜೀವಗಳನ್ನು ತೆಗೆಯುತ್ತಿದ್ದೆಯೇ ವಿನಃ ಉಳಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರಮುಖರಾದ ಹೆಚ್.ಸಿ.ಯೋಗೀಶ್, ನಾಗರಾಜ್, ಎಂ.ಚಂದನ್, ಹೆಚ್.ಪಿ.ಗಿರೀಶ್, ಯು.ಶಿವಾನಂದ್, ನಟರಾಜ್, ಚಂದ್ರಶೇಖರ್, ಪ್ರಮೋದ್, ಪ್ರಭಾಕರ್, ಮೂರ್ತಿ ಮುಂತಾದವರಿದ್ದರು.