ಭದ್ರಾವತಿ,ಮೇ೨೬: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಯುವಕನ ಕೊಲೆಯಾಗಿದ್ದು, ಮತ್ತೊಬ್ಬನು ಗಾಯಗೊಂಡಿದ್ದಾನೆ. ಘಟನೆ ನಡೆದ ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಜೈ ಭೀಮ್ ನಗರದ ಸುನಿಲ್ ಮೃತ ದುರ್ದೈವಿಯಾಗಿದ್ದು, ಆತನ ಸ್ನೇಹಿತ ಶ್ರೀಕಂಠ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಬಂಧ ಭದ್ರಾವತಿ ಅನ್ವರ್ ಕಾಲೋನಿಯ ಸಾಬೀತ್(೨೦),ಶಿವಮೊಗ್ಗ ಆರ್‌ಎಂಎಲ್‌ನಗರದ ಇದಾಯತ್ (೨೦),ಮಹಮದ್ ಜುನೇದ್(೨೦), ಬುದ್ದನಗರದ ನಿಶಾದ್ ಪಾಷಾ(೨೧) ಹಾಗೂ ತಬ್ರೇಜ್ ಪಾಷಾ (೨೧) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಆಯುಧ ಮತ್ತು ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ
ಮೇ.೨೫ ರಂದು ಭದ್ರಾವತಿಯ ಜೈ ಭೀಮ್ ನಗರದಲ್ಲಿ ಸುನೀಲ್, ಶ್ರೀಕಂಠ ಮತ್ತು ರಹೀಂ ಎಂಬುವವರು ನಿಂತಿದ್ದರು. ಇದೇ ಸಂದರ್ಭ ನಿಶಾದ್ ಪಾಷಾ ಮತ್ತು ಮಹಮದ್ ಜುನೇದ್ ಅಲ್ಲಿಗೆ ಬಂದು ಗುಟ್ಕಾ ತೆಗೆದುಕೊಳ್ಳಲು ಅಂಗಡಿ ಬರುತ್ತಾರೆ. ಸ್ಥಳದಲ್ಲಿದ್ದ ಸುನೀಲ್ ಪೊಲೀಸರು ಬಯ್ಯುತ್ತಾರೆ ಇಲ್ಲಿಗೇಕೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗುತ್ತದೆ. ನಿಶಾದ್ ಪಾಷಾನು ನಡೆದ ಘಟನೆ ಬಗ್ಗೆ ತನ್ನ ಸ್ನೇಹಿತ ತಬ್ರೇಜ್‌ಗೆ ಫೋನಿನಲ್ಲಿ ತಿಳಿಸುತ್ತಾನೆ. ಆಗ ಆತ ಸಾಬೀತ್‌ಗೆ ಮತ್ತು ಇದಾಯತ್‌ಗೆ ಫೋನ್ ಮಾಡಿ ಗಲಾಟೆ ಮಾಡಲು ಕುಮ್ಮಕ್ಕು ನೀಡುತ್ತಾನೆ. ಈ ನಾಲ್ಕೂ ಜನರು ಸೇರಿ ಜೈ ಭೀಮ್ ನಗರಕ್ಕೆ ಬಂದು ಬೈಕ್‌ನಿಂದ ಸುನೀಲ್‌ಗೆ ಡಿಕ್ಕಿ ಹೊಡೆಸಿ ಆತ ಬೀಳುತ್ತಿದ್ದಂತೆ ಬೆನ್ನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಗಲಾಟೆ ಬಿಡಿಸಲು ಬಂದ ಶ್ರೀಕಂಠನ ಮೇಲೂ ಹಲ್ಲೆ ಮಾಡಿದ್ದಾರೆ. ಸುನೀಲ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿರುತ್ತಾನೆ. ಭದ್ರವತಿ ಹಳೇನಗರ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.