Malenadu Mitra
Uncategorized

ಪಂಚಾಯತ್‍ರಾಜ್ ಇಲಾಖೆ ಸಿಬ್ಬಂದಿ ಕೊರೊನ ವಾರಿಯರ್ಸ್ ಕೆ.ಎಸ್.ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊರೊನ ವಾರಿಯರ್ಸ್ ಎಂದು ಪರಿಗಣಿಸಲು ಮುಖ್ಯಮಂತ್ರಿ ಅವರು ಅನುಮೋದನೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಬುಧವಾರ ಮುಖ್ಯಮಂತ್ರಿ ಅವರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಅವರು 4ಜಿಲ್ಲೆಗಳ 40 ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಗ್ರಾಮೀಣ ಭಾಗದಲ್ಲಿನ ಕೊರೊನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಕೊರೊನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಾಸಿಟಿವಿ ದರವನ್ನು ಇನ್ನಷ್ಟು ತಗ್ಗಿಸಲು ಕಠಿಣ ಕ್ರಮಗಳನ್ನು ಮುಂದುವರೆಸಲು ಸೂಚನೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಪ್ರಮಾಣವನ್ನು ಗಮನದಲ್ಲಿರಿಸಿ ಆಯಾ ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸೂಚನೆ ನೀಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 17 ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಕೊರೊನ ಪಾಸಿಟಿವ್ ವ್ಯಕ್ತಿಗಳು ಕಡ್ಡಾಯವಾಗಿ ಕೇರ್ ಸೆಂಟರ್‍ನಲ್ಲಿ ದಾಖಲಾಗಲು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕು ಹೋಂ ಐಸೋಲೇಷನ್‍ಗೆ ಅನುಮತಿ ನೀಡದಿರುವಂತೆ ತಿಳಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ತಲಾ ನಾಲ್ಕು ವಾರ್ಡ್‍ಗಳಿಗೆ ಒಂದರಂತೆ ಒಟ್ಟು 9 ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಆಯಾ ಭಾಗದ ಕಾರ್ಪೊರೇಟರ್‍ಗಳು ಜವಾಬ್ದಾರಿ ತೆಗೆದುಕೊಂಡು ಸ್ವಚ್ಛತೆ ಇತ್ಯಾದಿ ಕಾರ್ಯಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.

ವಿಡಿಯೋಸಂವಾದ

ತೀರ್ಥಹಳ್ಳಿ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಕೆ.ಭಾಸ್ಕರ್ ಅವರೊಂದಿಗೆ ಮುಖ್ಯಮಂತ್ರಿ ಅವರು ವಿಡಿಯೋ ಸಂವಾದದ ಮೂಲಕ ಮಾಹಿತಿಯನ್ನು ಪಡೆದುಕೊಂಡರು. ಕೊರೊನನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಮದುವೆ, ಮುಂಜಿ, ಜಾತ್ರೆಯಂತಹ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು. ಕೋವಿಡ್ ಪಾಸಿಟಿವಿಟಿ ದರ ಶೇ.10 ಕ್ಕೆ ಇಳಿಯಲು ಪ್ರಯತ್ನಿಸುವಂತೆ ಮುಖ್ಯಮಂತ್ರಿ ಅವರು ತಿಳಿಸಿದರು.

ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಭಾಸ್ಕರ್ ಅವರು ಮಾಹಿತಿ ನೀಡಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಇದುವರೆಗೆ 51 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಟಾಸ್ಕ್‍ಫೋರ್ಸ್ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಪಾಸಿಟಿವ್ ವ್ಯಕ್ತಿಗಳಿಗೆ ಮೆಡಿಕಲ್ ಕಿಟ್ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಶೇ.31 ಪಾಸಿಟಿವಿಟಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 20591 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಶೇ.54ರಷ್ಟು ಅಂದರೆ 11290 ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ವರದಿಯಾಗಿವೆ. ಪ್ರಸ್ತುತ 6900 ಸಕ್ರಿಯ ಪ್ರಕರಣಗಳು ಇದ್ದು, 3800 ಪ್ರಕರಣಗಳು ಗ್ರಾಮೀಣ ಭಾಗದಲ್ಲಿವೆ. ಆದರೆ ಕಳೆದ ನಾಲ್ಕು ದಿನಗಳಿಂದ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದ್ದು, ಗ್ರಾಮೀಣ ಭಾಗದಲ್ಲಿ ಪಾಸಿಟಿವಿಟಿ ದರ ಶೇ.31ರಷ್ಟಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು.

Ad Widget

Related posts

ದೆವ್ವದ ಹೆಸರಲ್ಲಿ ವೀಡಿಯೋ ವೈರಲ್ : ಶೇರ್ ಮಾಡೋರಿಗೆ ಶಿವಮೊಗ್ಗ ಪೊಲೀಸರ ವಾರ್ನಿಂಗ್

Malenadu Mirror Desk

ಶ್ರೀಗಂಧ ಕಳ್ಳನ ಬಂಧನ

Malenadu Mirror Desk

ಬಜೆಟ್ನಲ್ಲಿ ಅನುದಾನ ಮೀಸಲಿಡಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.