ಮಲೆನಾಡಿನ ಹೆಸರಾಂತ ನರರೋಗ ತಜ್ಞ ಡಾ.ಶಿವರಾಮಕೃಷ್ಣ ಅವರ ಆರೋಗ್ಯದ ವಿಚಾರದಲ್ಲಿ ಯಾರೊ ದುಷ್ಕರ್ಮಿಗಳು ಸುಳ್ಳು ವದಂತಿ ಹಬ್ಬಿಸುತಿದ್ದಾರೆ.
ವೈದ್ಯರು ನಿಧನರಾಗಿದ್ದಾರೆ ಎಂದು ಸಂತಾಪ ಸೂಚಿಸುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿವೆ. ಮಲೆನಾಡು ಮಾತ್ರವಲ್ಲದೆ ಸುತ್ತೇಳು ಜಿಲ್ಲೆಗಳಲ್ಲಿ ಮನೆಮಾತಾಗಿರುವ ಡಾ.ಶಿವರಾಮಕೃಷ್ಣ ಅವರು ಶಿವಮೊಗ್ಗದ ಆಸ್ತಿ. ನರಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಸುತ್ತಲ ಜಿಲ್ಲೆಗಳ ರೋಗಿಗಳಿಗೆ ಅವರು ಆಪದ್ಬಾಂಧವರಾಗಿದ್ದಾರೆ.
ಇಂತಹ ವ್ಯಕ್ತಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯವಾದುದು. ಸಿನಿಮಾ ತಾರೆಗಳ ವಿಚಾರದಲ್ಲಿ ಸುಳ್ಳು ಸಾವಿನ ಸುದ್ದಿ ಹಬ್ಬಿಸಿದ ಪ್ರಕರಣಗಳು ನಡೆದಿವೆ. ಇತ್ತೀಚೆಗಷ್ಟೆ ಖ್ಯಾತ ಹಾಸ್ಯನಟ ದೊಡ್ಡಣ್ಣ ಆರೋಗ್ಯ ಕುರಿತು ವದಂತಿ ಹಬ್ಬಿಸಿದ್ದು,ಖುದ್ದು ಅವರೇ, ನಾನು ಗುಂಡ್ ಕಲ್ಲಿನಂತೆ ಇದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.
ಮಲೆನಾಡಿನ ಪ್ರಖ್ಯಾತ ವೈದ್ಯರ ಬಗ್ಗೆ ಹರಿದಾಡಿದ ವದಂತಿಗಳಿಗೆ ಮುಕ್ತಿ ಹಾಡಲು ಸ್ವತಃ ಡಾ. ಶಿವರಾಮಕೃಷ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.ರೋಗಿಗಳ ಪಾಲಿನ ಸಂಜೀವಿನಿಯಾಗಿರುವ ಅವರು ನೂರು ಕಾಲ ಸುಖವಾಗಿ ಬಾಳಲಿ ಎನ್ನುವುದು ಮಲೆನಾಡು ಮಿರರ್ ಹಾರೈಕೆಯಾಗಿದೆ
“ಕಳೆದೆರಡು ದಿನಗಳಿಂದ ನನ್ನ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ದೇವರ ಅನುಗ್ರಹ ಮತ್ತು ಎಲ್ಲರ ಹಾರೈಕೆಯಿಂದ ನಾನು ಆರೋಗ್ಯವಾಗಿದ್ದೇನೆ.ಸಾಮಾಜಿಕ ಜಾಲತಾಣದಲ್ಲಿನ ತಪ್ಪು ಮಾಹಿತಿಗೆ ಯಾರೂ ಗಮನ ಹರಿಸಬಾರದು ಹಾಗೂ ಬಂಧು- ಬಾಂಧವರು, ಸ್ನೇಹಿತರು ಹಾಗೂ ಹಿತೈಷಿಗಳು ಆತಂಕಕ್ಕೆ ಒಳಗಾಗಬಾರದು” ಎಂದು ಮನವಿ ಮಾಡಿಕೊಂಡಿದ್ದಾರೆ.