ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಪುಟ ಒಪ್ಪಿಗೆ
ಶಿವಮೊಗ್ಗ ನಗರದ ಹೊರ ಭಾಗದ ಹೊಸ ಬಡಾವಣೆಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು 96.50ಕೋಟಿ ರೂ. ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗಾಜನೂರು ಅಣೆಕಟ್ಟಿನಿಂದ ಶಿವಮೊಗ್ಗ ನಗರದ ಪ್ರತಿ ಮನೆಗೆ ನೀರು ಸರಬರಾಜು ಮಾಡುವ 130.70 ಕೋಟಿ ರೂ. ವೆಚ್ಚದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಶೇ.55ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶಿವಮೊಗ್ಗ ನಗರದ ಹೊರಭಾಗದ ಕೆಲವು ಮಂಡಲ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳು ಹಾಗೂ ನಿರ್ಮಾಣಗೊಂಡಿರುವ ಹೊಸ ವಸತಿ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲು 96.50ಕೋಟಿ ರೂ. ಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸಂಪುಟದ ಅನುಮೋದನೆ ದೊರೆತಿದ್ದು, ಆದಷ್ಟು ಬೇಗನೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಗೌರವ ಸಂಭಾವನೆ ಹೆಚ್ಚಳ: ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಗೌರವ ಸಂಭಾವನೆಯನ್ನು ರೂ.7ಸಾವಿರದಿಂದ ರೂ.12ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಭಾವನೆ ಹೆಚ್ಚಳ ಇದೇ ಜೂನ್ ತಿಂಗಳಿನಿಂದ ಜಾರಿಯಾಗಲಿದೆ. ಇದೀಗ ಗ್ರಂಥಾಲಯ ಅವಧಿಯನ್ನು ಬೆಳಿಗ್ಗೆ 9ರಿಂದ 11ರವರೆಗೆ ಮತ್ತು ಮಧ್ಯಾಹ್ನ 4ರಿಂದ 6ಗಂಟೆಯವರೆಗೆ ಹೆಚ್ಚಿಸಲಾಗಿದೆ. ಈ ಮೊದಲ ಶಿಕ್ಷಣ ಇಲಾಖೆ ಅಧೀನದಲ್ಲಿದ್ದ 5633 ಗ್ರಾಮೀಣ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಜಲ ಜೀವನ್ ಮಿಷನ್
ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೆ ನೀರು ಒದಗಿಸುವ `ಮನೆ ಮನೆಗೆ ಗಂಗೆ’ ಯೋಜನೆಯಡಿ 7 ಬೃಹತ್ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ಒಟ್ಟು ಮೊತ್ತ 6768.85 ಕೋಟಿ ರೂ. ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಮುಂದಿನ ಎರಡೂವರೆ ವರ್ಷಗಳಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ನಿರ್ವಹಣೆ
ಕರೋನಾ ಹರಡುವಿಕೆ ತಡೆಯಲು ಗ್ರಾಮೀಣ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ 193 ಕಂಟೈನ್‍ಮೆಂಟ್ ವಲಯಗಳನ್ನು ಸ್ಥಾಪಿಸಲಾಗಿದ್ದು, ಜನರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯನ್ನು ಹಂತ ಹಂತವಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಜನರಿಗೆ ಹಾಕಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧಿ ಕೊರತೆ ಜಿಲ್ಲೆಯಲ್ಲಿ ಇರುವುದಿಲ್ಲ. ಮದುವೆ, ಮುಂಜಿಯಂತಹ ಸಭೆ ಸಮಾರಂಭಗಳಿಂದ ಕರೋನಾ ವ್ಯಾಪಕವಾಗಿ ಹರಡುತ್ತಿದ್ದು, ಜನರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಇಂತಹ ಸಭೆ ಸಮಾರಂಭಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.