ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಶನಿವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಒತ್ತಾಯಿಸಿದೆ.
ಈ ಸಂಬಂಧ ಮನವಿ ಸಲ್ಲಿಸಿರುವ ಸಂಘವು ಮೇ 31 ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಜೂ.1 ರಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುದಾಗಿ ಹೇಳಿದೆ. ಸರ್ಕಾರಿ ವೈದ್ಯಾಧಿಕಾರಿಗಳಿಗೆ ಕೊರೋನಾ ಸಂದರ್ಭದಲ್ಲಿ ವಿಶೇಷ ಭತ್ಯೆ ನೀಡಲು ಆದೇಶಿಸಲಾಗಿತ್ತು. ಕಾಲ ಕಾಲಕ್ಕೆ ನೀಡಲಾಗುವ ವೇತನ,ಭತ್ಯೆ ಹಾಗೂ ಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಆಯುಷ್ ವೈದ್ಯಾಧಿಕಾರಿಗಳನ್ನು ಹೊರತು ಪಡಿಸಿ ವಿಶೇಷ ಭತ್ಯೆ ನೀಡಿರುವುದು ಅಸಮಂಜಸ, ಅಸಮರ್ಥನೀಯ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾರತಮ್ಯ ನೀತಿ
ಕೊರೋನಾ ಹಾವಳಿಯ ಸಂದರ್ಭದಲ್ಲಿ ಸರ್ಕಾರವು ಪ್ರತಿಯೊಬ್ಬ ಅಲೋಪತಿ, ಆಯುಷ್ ವೈದ್ಯಾಧಿಕಾರಿಗಳನ್ನು ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ನಿಯೋಜಿಸಿದೆ. ಯಾವೊಬ್ಬ ಆಯುಷ್ ವೈದ್ಯಾಧಿಕಾರಿಯು ಹಿಂಜರಿಯದೆ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ. ಕೋವಿಡ್ ಕೇರ್ ಕೇಂದ್ರ, ತಪಾಸಣಾ ಕೇಂದ್ರ, ಚಿಕಿತ್ಸಾ ಕೇಂದ್ರದಲ್ಲಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಕೋವಿಡ್ ಹಾವಳಿಯ ನಿಯಂತ್ರಣದಲ್ಲಿ ಆಯುಷ್ ವೈದ್ಯಾಧಿಕಾರಿಗಳು, ಅರ್ಹನೀಯ ಕರ್ತವ್ಯ ನಿರ್ವಹಿಸಿರುವುದಕ್ಕೆ ದಾಖಲೆಗಳು ಇವೆ. ಹೀಗಿರುವಾಗ ಪ್ರತಿ ಹಂತದಲ್ಲಿಯೂ ಕೆಲಸ ಕಾರ್ಯಗಳಿಗೆ ಆಯುಷ್ ವೈದ್ಯರನ್ನು ಬಳಸಿಕೊಂಡು ವಿಶೇಷ ಭತ್ಯೆಯ ಪರಿಷ್ಕರಣೆಯಲ್ಲಿ ಮಾತ್ರ ಕೈ ಬಿಟ್ಟು ಆದೇಶ ಹೊರಡಿಸಿರುವುದು ತಾರತಮ್ಯ ನೀತಿಯಾಗಿದೆ. ಆಯುಷ್ ವೈದ್ಯರು ಕೇವಲ ಕರ್ತವ್ಯ ನಿರ್ವಹಣೆಗೆ ಮಾತ್ರ ಬೇಕು. ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಬೇಡ ಎನ್ನುವುದು ನಿಜಕ್ಕೂ ನೋವಿನ ಸಂಗತಿ.
ಈ ಬಗ್ಗೆ ಸರ್ಕಾರಕ್ಕೆ ಹಲವುಬಾರಿ ಮನವಿ ಸಲ್ಲಿಸಲಾಗಿದೆ. ಇಂತಹ ತಾರತಮ್ಯ ನೀತಿಯನ್ನು ಹೋಗಲಾಡಿಸಿ ವೈದ್ಯಾಧಿಕಾರಿಗಳಿಗೆ ನೀಡಿರುವ ವಿಶೇಷ ಭತ್ಯೆಯನ್ನು ಮೇ.31ರೊಳಗೆ ಮಂಜೂರು ಮಾಡಬೇಕು. ಇಲ್ಲದಿದ್ದಲ್ಲಿ ಜೂ.1 ರಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಲೇ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.