ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಉಂಟಾಗಬಹುದಾದ ಸಂಭಾವ್ಯ ತೊಂದರೆಗಳನ್ನು ಎದುರಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರೊಂದಿಗೆ ಮಕ್ಕಳ ಮೇಲೆ ಕೋವಿಡ್ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಅದನ್ನು ನಿರ್ವಹಿಸುವ ಬಗ್ಗೆ ಸಮಾಲೋಚನೆ ನಡೆಸಿದರು.
ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಜ್ವರದ ಲಕ್ಷಣಗಳು ಕಂಡು ಬಂದರೆ ಎಚ್ಚರಿಕೆ ವಹಿಸಬೇಕು. ಮಕ್ಕಳಿಗೆ ಮೂರು ದಿನಗಳಿಂತ ಹೆಚ್ಚು ಜ್ವರ ಇದ್ದ ಪ್ರಕರಣಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಕರೋನಾ ಪೀಡಿತ ಪಾಲಕರ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಈ ಕುರಿತು ಪಾಲಕರಿಗೆ ಮಾತ್ರವಲ್ಲದೆ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲು ಕ್ರಮ ವಹಿಸುವಂತೆ ಅವರು ತಿಳಿಸಿದರು.
50 ಬೆಡ್‍ಗಳ ಮಕ್ಕಳ ಕೋವಿಡ್ ವಾರ್ಡ್
ಸಂಭಾವ್ಯ ಕೋವಿಡ್ ಅಲೆಯನ್ನು ನಿಭಾಯಿಸಲು ಮೆಗ್ಗಾನ್‍ನಲ್ಲಿ ಕನಿಷ್ಟ 50 ಬೆಡ್‍ಗಳ ಮಕ್ಕಳ ಕೋವಿಡ್ ವಾರ್ಡ್ ಹಾಗೂ ಗುರುತರ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಪ್ರತ್ಯೇಕವಾಗಿ 50 ಬೆಡ್‍ಗಳ ವ್ಯವಸ್ಥೆಯನ್ನು ಮಾಡಬೇಕು. ಚಿಕಿತ್ಸೆಗೆ ಸಂಬಂಧಿಸಿದ ಯಂತ್ರೋಪಕರಣಗಳು ಮತ್ತು ಅಗತ್ಯ ಔಷಧಿಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳ ಕೋವಿಡ್ ನಿರ್ವಹಣೆ ಕುರಿತು ಸೂಕ್ತ ಕ್ರಿಯಾ ಯೋಜನೆ ಸಲ್ಲಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ 6ಕೆಎಲ್ ಆಕ್ಸಿಜನ್ ಸಂಗ್ರಹ ಪ್ಲಾಂಟ್‍ಗಳನ್ನು ಸ್ಥಾಪಿಸುವ ಕುರಿತು ಪರಿಶೀಲನೆ ನಡೆಸುವಂತೆ ಅವರು ಸೂಚನೆ ನೀಡಿದರು.
ಮಕ್ಕಳಲ್ಲಿ ಕೋವಿಡೋತ್ತರ ಆರೋಗ್ಯದ ತೊಂದರೆಗಳನ್ನು ಎದುರಿಸಲು ಐಸಿಯು ಸೇರಿದಂತೆ ಸಾಕಷ್ಟು ಸಿದ್ಧತೆ ಅಗತ್ಯವಿದೆ. ಕೋವಿಡ್ ಲಕ್ಷಣಗಳಿರುವ ಮಕ್ಕಳ ಕೋವಿಡ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿ ಅಗತ್ಯ ಪರೀಕ್ಷಾ ಉಪಕರಣಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹಿರಿಯ ವೈದ್ಯರು ಸಲಹೆಗಳನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಹಿರಿಯ ತಜ್ಞ ವೈದ್ಯರಾದ ಡಾ.ಧನಂಜಯ ಸರ್ಜಿ, ಡಾ.ವಿಕ್ರಂ, ಡಾ.ಶಂಭುಲಿಂಗ, ಡಾ.ಆರ್.ಬಿ.ಪಾಟೀಲ್, ಡಾ.ಶ್ರೀಕಾಂತ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಸಲಹೆಗಳನ್ನು ನೀಡಿದರು.