ಶಿವಮೊಗ್ಗ ಮಹಾನಗರ ಪಾಲಿಕೆಯು ಆನ್‌ಲೈನ್ ಮೂಲಕವೇ ಅದರಲ್ಲಿಯೂ ಮನೆ ಬಾಗಿಲಲ್ಲಿಯೇ ಕಂದಾಯ ಪಾವತಿಸಬಹುದು ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದ್ದಾರೆ.
ಗುರುವಾರ ಮಹಾನಗರ ಪಾಲಿಕೆಯಲ್ಲಿ ಕಂದಾಯ ಪಾವತಿಸುವ ವಿನೂತನ ಕಾರ್ಯಕ್ರಮಕ್ಕೆ ತಮ್ಮ ಮನೆಯ ಕಂದಾಯವನ್ನು ಸ್ವತಃ ತಾವೇ ಆನ್‌ಲೈನ್‌ನಲ್ಲಿ ಪಾವತಿಸುವ ಮೂಲಕ ಚಾಲನೆ ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಟ್ಟಲು ಪರದಾಡಬೇಕಿತ್ತು. ಪಾಲಿಕೆಗೆ ಹೋಗಿ ತಾವು ಎಷ್ಟು ಕಟ್ಟಬೇಕೆಂದು ಬರೆಸಿಕೊಂಡು ಅನಂತರ ಬ್ಯಾಂಕ್ ಅಥವಾ ಶಿವಮೊಗ್ಗ ಒನ್‌ಗೆ ತೆರಳಿ ಕಟ್ಟಬೇಕಿತ್ತು. ಈಗ ಈ ಅಲೆದಾಟವೆಲ್ಲ ಹೊಸ ರೀತಿಯ ಪಾವತಿ ವ್ಯವಸ್ಥೆ ಮೂಲಕ ತಪ್ಪಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ಕಂದಾಯ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಮನೆಯ ಕಂದಾಯವನ್ನು ಮನೆಯಲ್ಲಿಯೇ ಆನ್‌ಲೈನ್ ಮೂಲಕ ಕಟ್ಟಿದರೆ ಅಲ್ಲಿಯೇ ಅವರಿಗೆ ರಶೀದಿಯನ್ನು ಕೂಡ ನೀಡುತ್ತಾರೆ. ಆದರೆ ನಗದು ಪಾವತಿಸಲು ಅವಕಾಶವಿಲ್ಲ. ಏನಿದ್ದರೂ ಆನ್‌ಲೈನ್ ಮೂಲಕವೇ ಪಾವತಿಸಬೇಕು ಎಂದು ಅವರು ತಿಳಿಸಿದರು.
ಜೂ.೩೦ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.೫ ರಷ್ಟು ರಿಯಾಯಿತಿಯಿದ್ದು, ಇದನ್ನು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು. ಇದಕ್ಕಾಗಿ ಸಾರ್ವಜನಿಕರು ಪಾಲಿಕೆಗೆ ಕರೆ ಕೂಡ ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಮೇಯರ್ ಶಂಕರ್‌ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್ ಮೊದಲಾದವರಿದ್ದರು.
previous post