Malenadu Mitra
ರಾಜ್ಯ ಶಿವಮೊಗ್ಗ

ವಸತಿ ಯೋಜನೆಗಳ ಪೂರ್ಣಗೊಳಿಸಲು ಆರ್ಥಿಕ ನೆರವು: ಸಚಿವ ವಿ.ಸೋಮಣ್ಣ

ಶಿವಮೊಗ್ಗ ಜಿಲ್ಲೆಯಲ್ಲಿ ಅನುಷ್ಟಾನ ಹಂತದಲ್ಲಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಎಲ್ಲಾ ಆರ್ಥಿಕ ನೆರವು ಒದಗಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಈಗಾಗಲೇ ಅನುಮೋದನೆಗೊಂಡು ಅನುಷ್ಟಾನ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಗಳಲ್ಲಿ ಕುಡಿಯುವ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ರಸ್ತೆ ನಿರ್ಮಾಣದಂತಹ ಮೂಲಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದಲೇ ನೇರವಾಗಿ ಹಣಕಾಸು ನೆರವು ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಈ ಕುರಿತಾದ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿರಿಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಘೋಷಿತ ಸರ್ಕಾರಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ರಾಜ್ಯದಾದ್ಯಂತ ಆರಂಭಿಸಲಾಗಿದೆ. ಫಲಾನುಭವಿಗಳು ಕೊಳಚೆ ಮಂಡಳಿಗೆ ಪಾವತಿಸುವ ಮೊತ್ತಕ್ಕೆ ಮಾತ್ರ ಸ್ಟಾಂಪ್ ಡ್ಯೂಟಿ ವಿಧಿಸಲು ಎಲ್ಲಾ ಸಬ್ ರಿಜಿಸ್ಟ್ರಾರ್‍ಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ ಮನೆಗಳ ನಿರ್ಮಾಣಕ್ಕಾಗಿ ನಗರ ಪ್ರದೇಶಗಳಲ್ಲಿ 137 ಎಕ್ರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 52 ಎಕ್ರೆ ಜಮೀನು ಗುರುತಿಸಲಾಗಿದ್ದು, ಇದಕ್ಕೆ ಅನುಮೋದನೆಯನ್ನು ನೀಡಲಾಗುವುದು. ಇದರಲ್ಲಿ ನಗರ ಪ್ರದೇಶದಲ್ಲಿ 5489 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1043 ಸೇರಿದಂತೆ ಒಟ್ಟು 6532 ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಅರ್ಹರಿಗೆ ದೊರೆಯುವಂತೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವಿರೂಪಿನಕಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಅನುದಾನವನ್ನು ರಾಜೀವ್‍ಗಾಂಧಿ ವಸತಿ ನಿಗಮದಿಂದ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಬೇಕು. ಇದೇ ರೀತಿ ವಿವಿಧ ತಾಲೂಕುಗಳಲ್ಲಿ ಪಾವತಿಗೆ ಬಾಕಿಯಿರುವ ವಸತಿ ಯೋಜನೆ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಚಿವ ಕೆಎಸ್. ಈಶ್ವರಪ್ಪ ಮನವಿ

ಘೋಷಿತ ಸರ್ಕಾರಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ರೀತಿಯಲ್ಲಿ ಖಾಸಗಿ ಜಮೀನಿನಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಹಾಗೂ ಸರ್ಕಾರಿ ಹಾಗೂ ಖಾಸಗಿ ಜಮೀನಿನಲ್ಲಿರುವ ಅಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೂ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು. ನಗರದಲ್ಲಿ ನೀರಾವರಿ ಚಾನೆಲ್ ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಕುರಿತು ಪರ್ಯಾಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಹರತಾಳು ಹಾಲಪ್ಪ, ಬಿ.ಕೆ.ಸಂಗಮೇಶ್ವರ, ಕುಮಾರ ಬಂಗಾರಪ್ಪ, ಪ್ರಸನ್ನ ಕುಮಾರ್, ರುದ್ರೇಗೌಡ, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ, ರಾಜೀವ್‍ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಸತಿ ಸಚಿವ ವಿ ಸೋಮಣ್ಣ ಅವರನ್ನು ಐಬಿಯಲ್ಲಿ ಸ್ವಾಗತಿಸಿದ ಸಂಸದ ಬಿ ವೈ ರಾಘವೇಂದ್ರ. ಹಾಗೂ ಶಾಸಕರಾದ ಎಸ್ ರುದ್ರೇಗೌಡ .ಅಶೋಕ್ ನಾಯಕ್. ಆಯನೂರು ಮಂಜುನಾಥ್ ಮತ್ತಿತರರಿದ್ದರು
Ad Widget

Related posts

ಶಿಸ್ತು ಬದ್ಧ ಜೀವನಕ್ಕೆ ಕಾನೂನಿನ ಅರಿವು ಅವಶ್ಯಕ : ಹಿರಿಯ ಸಿವಿಲ್ ನ್ಯಾಯದೀಶೆ ಸರಸ್ವತಿ ಕೆ.ಎನ್

Malenadu Mirror Desk

ಈ ಬಾರಿಯೂ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಇಲ್ಲ

Malenadu Mirror Desk

ನ. 4,5 ರಂದು ವಿಐಎಸ್ ಎಲ್ ಶತಮಾನೋತ್ಸವ ಮೈಸೂರು ಯುವರಾಜ, ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಸಿದ್ದರಾಮಯ್ಯ, ಡಿಕೆಶಿ, ಮಠಾಧೀಶರ ಆಗಮನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.