ಕೆರೆ ಪುನರ್‌ಶ್ಚೇತನ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಸಮೀಪದ ಮಲ್ಲಿಗೇನಹಳ್ಳಿ ರಾಮಿನಕಟ್ಟೆ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆಯೇ ತಮ್ಮ ಹುಟ್ಟು ಹಬ್ಬವನ್ನು ಒಂದು ಕೆರೆಯ ಅಭಿವೃದ್ಧಿಯ ಮೂಲಕ ಆಚರಿಸಲಾಗುವುದು ಎಂದು ಪ್ರಕಟಿಸಿದ್ದು, ಅದರಂತೆ ಈ ಕೆರೆಯ ಜಾಗದಲ್ಲಿ ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡದ ಸಹಯೋಗದೊಂದಿಗೆ ಈ ಕೆರೆಯನ್ನು ಪುನರುಜ್ಜೀವಗೊಳಿಸಲಾಗುವುದು ಮತ್ತು ಕೆರೆಯ ಸುತ್ತಲೂ ಹಸಿರು ಬೆಳೆಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಒಂದು ಸಮಿತಿ ರಚಿಸಲಾಗುವುದು. ಕೆರೆಯನ್ನು ಅಭಿವೃದ್ಧಿ ಪಡಿಸಲು ಪರಿಸರಾಸಕ್ತರು ಮುಂದೆ ಬಂದರೆ ಅವರನ್ನು ಬಳಸಿಕೊಂಡು ಮೊದಲ ಸುತ್ತಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಕೆರೆಯನ್ನು ಆಯ್ಕೆ ಮಾಡಿಕೊಂಡು ದುರಸ್ಥಿ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ, ಕೆರೆ ಕಟ್ಟೆಗಳು ಪ್ರಭಾವಿಗಳ ಪಾಲಾಗಿದ್ದು, ಕೆರೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಜಲ ಮೂಲಗಳು ಸರಿಯಾಗಿ ಇಲ್ಲದೆ ಇರುವುದರಿಂದ ನದಿಗಳು ಅಕಾಲಿಕವಾಗಿ ಬತ್ತುವಂತಾಗಿದೆ ಎಂದು ಹೇಳಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶಿವಪ್ಪನಾಯಕನ ಕಾಲದಲ್ಲಿಯೇ ಪ್ರಾದೇಶಿಕಾ ವಾತಾವರಣಕ್ಕೆ ಅನುಗುಣವಾಗಿ ಬೆಳೆ ಬೆಳೆಯಲು ಆದೇಶ ಮಾಡಿದ್ದ. ಆದರೆ ಕ್ರಮೇಣ ಅದು ಕಣ್ಮರೆಯಾಗಿದೆ. ಹಿರಿಯರು ನಮಗೆ ಪರಿಸರ ಬಿಟ್ಟು ಹೋಗಿದ್ದಾರೆ. ನಾವು ಮುಂದಿನ ಪೀಳಿಗೆಗೆ ಪರಿಸರ ಬಿಟ್ಟು ಹೋಗುವಂತ ಯೋಜನೆಗಳನ್ನು ರೂಪಿಸಬೇಕೆಂದು ಹೇಳಿದರು.
ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿವಾನಂದ ಕಳವೆ ವಿಶೇಷ ಉಪನ್ಯಾಸ ನೀಡಿದರು. ಶಾಸಕ ಅಶೋಕ್‌ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್. ರುದ್ರೇಗೌಡ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಪಟ್ಟಾಭಿರಾಮ, ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್‌ಗನ್ನಿ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ಈ.ಕಾಂತೇಶ್, ಜಯಲಕ್ಷ್ಮೀ ಈಶ್ವರಪ್ಪ, ಪ್ರೊ.ಬಿ.ಎಂ.ಕುಮಾರ ಸ್ವಾಮಿ, ಪ್ರೊ.ಚಂದ್ರಶೇಖರ್ ಮತ್ತಿತರರು ಇದ್ದರು.