ಸರ್ಕಾರ ಕೊರೊನಾ ನಿಯಂತ್ರಿಸಲು ಅನಿವಾರ್ಯವಾಗಿ ಲಾಕ್‌ಡೌನ್ ಜಾರಿಗೊಳಿಸಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಮಾನವೀಯತೆಯಾಗಿದ್ದು, ಸರ್ಕಾರದ ಜತೆಗೆ ಅನೇಕ ಸಂಘ ಸಂಸ್ಥೆಗಳು ಕೂಡ ನೆರವನ್ನು ನೀಡುತ್ತಿರುವುದು ಸಂತಸದ ವಿಚಾರವೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸೊರಬ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ಸೇವಾ ಭಾರತಿ, ಪ್ರೇರಣಾ ಎಜ್ಯುಕೇಷನಲ್ ಟ್ರಸ್ಟ್ ವತಿಯಿಂದ ಕೊರೊನಾ ವಾರಿಯರ್‍ಸ್ ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೊನಾ ಸಂಕಷ್ಟದಲ್ಲಿ ಸಾವು-ನೋವುಗಳು ಸಹ ಸಂಭವಿಸಿದೆ. ಸಮಾಜದ ಎಲ್ಲರೂ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಸುಮಾರು ೩೫ ಸಾವಿರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಇಳಿಮುಖವಾಗುತ್ತಿದೆ. ಆದರೆ, ಇನ್ನೂ ಕಡಿಯಾಗಬೇಕು. ಕೊರೊನಾ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಾದ ಬೆನ್ನಲ್ಲೆ ಅನೇಕ ದುಡಿದು ಬದುಕುವ ವರ್ಗಗಳು ಸಂಕಷ್ಟದಲ್ಲಿದ್ದು, ಅಂತಹ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ದಿನಸಿ ಕಿಟ್‌ಗಳನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸೇವಾ ಭಾರತಿ ನೇತೃತ್ವದಲ್ಲಿ ಸಂಕಷ್ಟದ ಕುಟುಂಬಗಳಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲ ಮಾಡಲಾಗುತ್ತಿದೆ.
ಶಾಸಕ ಎಸ್. ಕುಮಾರ್ ಬಂಗಾರಪ್ಪ ಮಾತನಾಡಿ, ಕೊರೊನಾ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಸೇರಿದಂತೆ ಎಲ್ಲಾ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ. ಜನತೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಸೂಚಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.
ಪೌರ ಕಾರ್ಮಿಕರು, ಆಟೋ ಚಾಲಕರು, ಛಾಯಚಿತ್ರಕಾರರು, ಗೃಹರಕ್ಷಕದಳದ ಸಿಬ್ಬಂದಿ, ಸವಿತಾ ಸಮಾಜದವರು, ಖಾಸಗಿ ಬಸ್ ನಿರ್ವಾಹಕರು ಮತ್ತು ಚಾಲಕರು, ಸೇರಿದಂತೆ ಸುಮಾರು ಹಲವು ವರ್ಗದವರಿಗೆ ದಿನಸಿ ವಸ್ತುಗಳ ಕಿಟ್‌ನ್ನು ಸಾಂಕೇತಿಕವಾಗಿ ನೀಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ಈರೇಶ್ ಮೇಸ್ತ್ರಿ, ಪ್ರಭು ಮೇಸ್ತ್ರಿ, ಪ್ರೇಮಾ, ಜಯಲಕ್ಷ್ಮಿ, ನಟರಾಜ್, ದಿವಾಕರ ಭಾವೆ, ಎಂ. ನಾಗಪ್ಪ ವಕೀಲ ಇತರರಿದ್ದರು.
previous post