ಮಳೆ ಬರುವುದಕ್ಕೆ ಮುಂಚೆ ನಗರದ ಸ್ಮಾರ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಅವರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಜೊತೆ ಶಿವಮೊಗ್ಗನಗರ ಪ್ರದಕ್ಷಿಣೆ ಮಾಡಿ ಕಾಮಗಾರಿಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಭರದಿಂದ ಸಾಗಿವೆ ಮತ್ತು ಉತ್ತಮವಾಗಿ ನಡೆಯುತ್ತಿವೆ. ಶಿವಮೊಗ್ಗಕ್ಕೆ ಬರುವುದೆಂದರೆ ನನಗೆ ತುಂಬಾ ಇಷ್ಟ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದರು.
ಈಗಾಗಲೇ ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಕೆಲವು ಪ್ರಗತಿಯಲ್ಲಿವೆ. ಇನ್ನು ಕೆಲವು ನಡೆಯಬೇಕಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗಳ ಸಮರ್ಪಕ ಅನುಷ್ಟಾನಕ್ಕೆ ಕ್ರಮಕೈಗೊಳ್ಳಲಾಗುವುದು. ಕೆಲವು ಸಮಸ್ಯೆಗಳು ಇವೆ ಎಂದು ನನಗೂ ಗೊತ್ತು. ಕೊರೋನಾದಂತಹ ಸಂದರ್ಭದಲ್ಲಿ ಕಾಮಗಾರಿಗೆ ಹಿನ್ನಡೆಯಾಗಿರುವುದು ನಿಜ. ಆದರೆ ಮುಂದೆ ಆಗುವುದಿಲ್ಲ. ಇದರ ಒಟ್ಟೊಟ್ಟಿಗೆ ಕೊರೋನಾ ನಿಯಂತ್ರಣಕ್ಕೂ ಕೂಡ ಕ್ರಮಕೈಗೊಳ್ಳಲಾಗುವುದು ಎಂದರು.
ಬಹಳ ಮುಖ್ಯವಾಗಿ ಗಾಂಧಿಪಾರ್ಕಿನ ಎದುರು ಈಗಿರುವ ಸ್ಥಳದಲ್ಲಿಯೇ ಬಸವೇಶ್ವರ ಪುತ್ಥಳಿಯನ್ನು ಸ್ಥಾಪಿಸಲು ಎಲ್ಲಾ ರೀತಿಯ ತಯಾರಿ ನಡೆದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೆ ಇದರ ಉದ್ಘಾಟನೆ ಮಾಡಲಿದ್ದಾರೆ. ಲಂಡನ್ನಿಂದ ತರಿಸಲಾದ ಬಸವೇಶ್ವರ ಪುತ್ಥಳಿಯನ್ನು ಪ್ರವೇಶದ್ವಾರದಲ್ಲಿಯೇ ನಿರ್ಮಿಸಲಾಗುವುದು. ಒಟ್ಟಾರೆ ಶಿವಮೊಗ್ಗವನ್ನು ಮಾದರಿ ನಗರವನ್ನಾಗಿ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಂಪರ್ಕ ಇಟ್ಟುಕೊಂಡಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಶಿವಮೊಗ್ಗ ನಗರಕ್ಕೆ ಬಂದಾಗಲೆಲ್ಲ ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಲೇ ಇದ್ದಾರೆ. ಅವರು ಮೊದಲ ಬಾರಿ ಬಂದಾಗ ಯೋಗ ಭವನಕ್ಕೆ ೪ಕೋಟಿ ರೂ.ಗಳನ್ನು ನೀಡಿದ್ದರು. ನಂತರ ಪಾರ್ಕ್‌ಗಳ ಅಭಿವೃದ್ಧಿಗಾಗಿ ೨.೧೫ಕೋಟಿ ನೀಡಿದರು. ಈ ಹಣದಲ್ಲಿ ೧೫ ಪಾರ್ಕ್‌ಗಳ ಅಭಿವೃದ್ಧಿಯಾಗುತ್ತಿದೆ. ಈಗ ಮತ್ತೊಂದು ಮಹತ್ವದ ಕೊಡುಗೆಯನ್ನು ಶಿವಮೊಗ್ಗ ನಗರಕ್ಕೆ ನೀಡಿದ್ದಾರೆ ಎಂದರು.
ಇದಕ್ಕೂ ಮೊದಲು ಭೈರತಿ ಬಸವರಾಜ್ ಅವರು ಈಶ್ವರಪ್ಪ ಅವರ ಜೊತೆ ನಗರ ಪ್ರದಕ್ಷಿಣೆ ಮಾಡಿದರು. ಪಾರ್ಕ್‌ಗಳಲ್ಲಿ ಆಟವಾಡಿ ಉಲ್ಲಾಸ ಗೊಂಡರು. ನಂತರ ಆದಿಚುಂಚನಗಿರಿ ಫ್ರೌಢ ಶಾಲೆಯ ಮುಂಭಾಗದ ಕಾಮಗಾರಿ, ಜ್ಯುಯಲ್‌ರಾಕ್ ಹಿಂಭಾಗದ ಪಾರ್ಕ್ ವೀಕ್ಷಣೆ, ದುರ್ಗಿಗುಡಿ ಸ್ಮಾರ್ಟ್ ಕ್ಲಾಸ್ ವೀಕ್ಷಣೆ, ಕನ್ಸರ್‌ವೆನ್ಸಿ ರಸ್ತೆ, ಎಲ್‌ಬಿಎಸ್ ನಗರದಲ್ಲಿ ಪರಿಸರಾಸಕ್ತರಿಂದ ನಿರ್ಮಾಣವಾಗುತ್ತಿರುವ ಕೆರೆ ಪರಿಶೀಲನೆ ಮುಂತಾದ ಕಡೆ ಭೇಟಿ ನೀಡಿದರು.
ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್‌ಗನ್ನಿ, ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಎಸ್.ದತ್ತಾತ್ರಿ, ಜ್ಞಾನೇಶ್ವರ್,ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಹಲವರಿದ್ದರು.