ಯಡಿಯೂರಪ್ಪ ಅವರಿಂದ ನಾಯಕತ್ವ ಕಿತ್ತುಕೊಂಡರೆ ಅನಾಹುತವಾದೀತು ಎಂದು ಮಲೆನಾಡು ಮಠಾಧೀಶರ ಒಕ್ಕೂಟ ಎಚ್ಚರಿಕೆ ನೀಡಿದೆ.
ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗಾಶ್ರಮದಲ್ಲಿ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿಯೇ ಕೇಂದ್ರ ಬಿಜೆಪಿ ನಾಯಕರಿಗೆ ಮಠಾಧೀಶರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಾಳೇನಹಳ್ಳಿ ಮಠಾಧೀಶರು ಲಿಂಗೈಕ್ಯರಾದ ಸಂದರ್ಭ ಯಡಿಯೂರಪ್ಪ ಅವರು ಮಠಕ್ಕೆ ಬೇಟಿ ನೀಡದಿದ್ದ ಕಾರಣ ತಮ್ಮ ತವರು ಕ್ಷೇತ್ರದ ಪ್ರವಾಸದ ವೇಳೆ ಶನಿವಾರ ಮಠಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಮುಖ್ಯಮಂತ್ರಿಯವರನ್ನು ಗೌರವಿಸಿದ ಬೆಕ್ಕಿನಕ್ಲಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರು, ಕೊರೊನ ಸಂಕಷ್ಟವನ್ನು ಯಡಿಯೂರಪ್ಪ ಅವರು ಸಮರ್ಥವಾಗಿ ಎದುರಿಸಿದ್ದಾರೆ. ಕಾಯಕ ಪ್ರೇಮಿಯಾದ ಅವರು ಹಗಲಿರುಳೂ ಈ ರಾಜ್ಯದ ಶ್ರೇಯಸ್ಸಿಗೆ ಶ್ರಮಿಸಿದ್ದಾರೆ.ಅವರ ನಾಯಕತ್ವವನ್ನು ಕರ್ನಾಟಕದ ಜನ ಒಪ್ಪಿಕೊಂಡಿದ್ದಾರೆ. ಹೋರಾಟದಿಂದಲೇ ಜನನಾಯಕರಾದ ಯಡಿಯೂರಪ್ಪ ಅವರ ಕೆಲಸ ಮತ್ತು ಸಂಘಟನೆಯನ್ನು ಬಿಜೆಪಿ ಕೇಂದ್ರ ನಾಯಕರು ಗೌರವಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಇದು ಸಮಯವಲ್ಲ. ಒಂದು ವೇಳಿ ಆ ಪಕ್ಷದ ನಾಯಕತ್ವ ಈ ದಿಸೆಯಲ್ಲಿ ಯೋಚನೆ ಮಾಡಿದ್ದೇ ಆದರೆ ನಾಡಿನಲ್ಲಿ ಕೊರೊನಕ್ಕಿಂತ ದೊಡ್ಡ ಅನಾಹುತ ಆಗುತ್ತದೆ ಎಂಬ ಮನವಿ ಮತ್ತು ಎಚ್ಚರಿಕೆಯನ್ನು ನಾವು ನೀಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷ ಗುರುಮೂರ್ತಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.