ಗೋಹತ್ಯೆ ನಿಷೇಧವನ್ನು ವಿರೋಧಿಸುವ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗ ಜಮೀರ್ ಅಹ್ಮದ್ ಹಾಗೂ ಕಲಂ 370 ಬಗ್ಗೆ ಮಾತನಾಡುವ ದಿಗ್ವಿಜಯ್ ಸಿಂಗ್ ಇವರೆಲ್ಲ ಪಾಕಿಸ್ತಾನ ಪರ ಇರುವವರು ಎಂಬ ಗಂಭೀರ ಆರೋಪವನ್ನು ಸಚಿವ ಕೆ.ಎಸ್.ಈಶ್ವರಪ್ಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಂ 370 ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ದಿಗ್ವಿಜಯ್‍ಸಿಂಗ್ ಅವರದ್ದು ರಾಷ್ಟ್ರ ದ್ರೋಹದ ಹೇಳಿಕೆಯಾಗಿದೆ. ದೇಶದಲ್ಲಿ ಹಿಂದೂ, ಮುಸ್ಲಿಮರು ಶಾಂತಿಯಿಂದ ಇರಬೇಕು ಎನ್ನುವ ಕಲ್ಪನೆಯೇ ಇವರಿಗಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‍ನಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಇಲ್ಲ ಎನ್ನುವುದಾದರೆ ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಪ್ಪುತ್ತಾರಾ ಎಂದು ಪ್ರಶ್ನಿಸಿದರು.
ಆದರೆ, ಬಿಜೆಪಿಯಲ್ಲಿ ಹಾಗಲ್ಲ. ಈ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ. ಇಲ್ಲಿ ಹೇಳುವವರು, ಕೇಳುವವರು ಇದ್ದಾರೆ. ಇದು ಬಿಜೆಪಿ ವಿಶೇಷತೆ ಎಂದು ತಿಳಿಸಿದರು.
ಶಾಸಕರ ಅಭಿಪ್ರಾಯ ಕೇಳಲಿರುವ ಅರುಣ್ ಸಿಂಗ್
ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 16ರಿಂದ ಮೂರು ದಿನ ಪ್ರವಾಸ ಕೈಗೊಂಡು ಕ್ಯಾಬಿನೆಟ್ ಸಚಿವರು, ಕೋರ್ ಕಮಿಟಿ ಸದಸ್ಯರು, ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಇಲ್ಲಿ ಶಾಸಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಅರುಣ್ ಸಿಂಗ್ ಭೇಟಿಯಿಂದ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಯಾರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಪರ ವಿರೋಧದ ಹೇಳಿಕೆ ನೀಡುವಂತಿಲ್ಲ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷರ ಆದಿಯಾಗಿ ಯಾರೂ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ. ಜತೆಗೆ, ಯೋಗೇಶ್ವರ್ ಕೂಡ ಹೇಳಿಕೆ ನೀಡದಂತೆ ವರಿಷ್ಠರು ತಿಳಿಸಿದ್ದಾರೆ ಎಂದರು.