ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ಶಾಸಕರು ದೂರು ಕೊಡಬಹುದು !. ಅರೆ ಏನಿದು ಹೊಸ ವರಾತ ಅಂದಿರಾ ? ಇದು ಸ್ವತಃ ಬಿಜೆಪಿ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರುವ ಮಾತು.
ಶಿವಮೊಗ್ಗ ತಾಲೂಕು ಹಸೂಡಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಬುಧವಾರ ಮತ್ತು ಗುರುವಾರ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್ ರಾಜ್ಯಕ್ಕೆ ಬರಲಿದ್ದಾರೆ. ಮೊದಲ ದಿನ ಮಂತ್ರಿಗಳೊಂದಿಗೆ ಸಭೆ ನಡೆಯಲಿದೆ. ಗುರುವಾರ ನಮ್ಮ ಎಲ್ಲಾ ಶಾಸಕರೊಂದಿಗೆ ಅರುಣ್‍ಸಿಂಗ್ ಮಾತನಾಡುವರು. ಅಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ -ವಿರುದ್ಧದ ಅನಿಸಿಕೆ ದೂರುಗಳನ್ನು ಹೇಳಿಕೊಳ್ಳಲು ಅವಕಾಶ ಇದೆ. ವರಿಷ್ಠರ ಮುಂದೆ ಶಾಸಕರು ತಮ್ಮ ಬೇಗುದಿಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ನಮ್ಮದೇನು ಕಾಂಗ್ರೆಸ್‍ಗೆ ಕೆಟ್ಟುಹೋದ ಪಕ್ಷ ಅಲ್ಲ. ಮೂರು ಪಕ್ಷಗಳ ಸರಕಾರ ಎಂದ ಯೋಗಿಶ್ವರ್, ಸಹಿಸಂಗ್ರಹ ಮಾಡಿರುವ ರೇಣುಕಾಚಾರ್ಯ ಎಲ್ಲರೂ ಬಾಯಿ ಮುಚ್ಚಿಕೊಂಡು ಇರುವಂತೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿಗೆ ಅದರದ್ದೇ ಆದ ರೀತಿ ರಿವಾಜುಗಳಿವೆ ಇಲ್ಲಿ ಪ್ರಜಾಪ್ರಭುತ್ವ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಅಲ್ಲಿ ಜಮೀರ್ ಅಹಮದ್ ಸಿದ್ದರಾಮಯ್ಯರನ್ನು ಸಿಎಂ ಮಾಡಲು ನಾನು ಕ್ಷೇತ್ರ ಬಿಟ್ಟು ಕೊಡುವೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳಿಂದ ಡಿ,ಕೆ.ಶಿವಕುಮಾರ್ ಒಪ್ಪಿಗೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು. ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಕಾರ್ಯಾಲಯದ ಹಸ್ತಕ್ಷೇಪ ತಪ್ಪಿಸಿ ಎಂದು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೇ ರೀತಿ ಇತ್ತೀಚೆಗೆ ಮತ್ತೊಬ್ಬ ಸಚಿವ ಸಿ.ಪಿ.ಯೋಗೀಶ್ವರ್ ಅವರು, ನನ್ನ ಕೆಲಸವನ್ನು ನನ್ನ ಮಗ ಮಾಡಬಾರದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುಟುಂಬ ಹಸ್ತಕ್ಷೇಪವನ್ನು ಪ್ರಶ್ನೆ ಮಾಡಿದ್ದರು.
ಹಸೂಡಿ ಪಂಚಾಯಿತಿಯಲ್ಲಿ ಕೋವಿಡ್‍ಜಾಗೃತಿ ಮತ್ತು ಲಸಿಕಾ ಅಭಿಯಾನವನ್ನು ವೀಕ್ಷಿಸಿದ ಈಶ್ವರಪ್ಪ, ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಟಾಸ್ಕ್‍ಫೋರ್ಸ್ ಮಾಡಿರುವುದರಿಂದ ಸೋಂಕು ತಡೆಗಟ್ಟಲು ಅನುಕೂಲವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿಗಾವಹಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.