Malenadu Mitra
ರಾಜ್ಯ ಶಿವಮೊಗ್ಗ

ಅವೈಜ್ಞಾನಿಕ ಆಸ್ತಿ ತೆರಿಗೆ:ಕೆ.ವಿ.ವಸಂತಕುಮಾರ್

ಶಿವಮೊಗ್ಗ ಮಹಾನಗರ ಪಾಲಿಕೆ2020-21 ನೇ ಸಾಲಿನಲ್ಲಿ ಜಾರಿಗೆ ತಂದಿರುವ ಅವೈಜ್ಞಾನಿಕ ಆಸ್ತಿ ತೆರಿಗೆ ಪದ್ದತಿಯನ್ನು ಕೂಡಲೆ ವಾಪಸ್ಸು ಪಡೆಯಬೇಕು ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಎಸ್‌ಆರ್ ದರದ ಮೇಲೆ ಆಸ್ತಿ ತೆರಿಗೆಯನ್ನು ವಿಧಿಸುತ್ತಿದೆ. ಸಬ್‌ರಿಜಿಸ್ಟ್ರಾರ್ ದರ ಹೆಚ್ಚಾದಂತೆ ತೆರಿಗೆ ದರವು ಏರುತ್ತದೆ. ಪ್ರತಿ ವರ್ಷ ಎಸ್‌ಆರ್ ದರವು ಹೆಚ್ಚುತ್ತಾ ಹೋಗುತ್ತದೆ ಹಾಗಾಗಿ ತೆರಿಗೆಯೂ ಕೂಡ ಹೆಚ್ಚುತ್ತಾ ಹೋಗುತ್ತದೆ. ಇದು ಹೀಗೆ ಆದರೆ ಆಸ್ತಿ ಮಾರಿ ತೆರಿಗೆ ಕಟ್ಟುವಂತಹ ಸ್ಥಿತಿ ಬರುತ್ತದೆ. ಮಧ್ಯಮ ಮತ್ತು ಬಡ ಕುಟುಂಬಗಳಿಗಂತು ಇದು ತುಂಬಾ ಹೊರೆಯಾಗುತ್ತದೆ. ಎಸ್‌ಆರ್ ದರವೇ ಅವೈಜ್ಞಾನಿಕವಾಗಿದೆ. ಒಂದೊಂದು ಬಡಾವಣೆಗೆ ಒಂದೊಂದು ರೀತಿಯಿದೆ. ಈ ದರಗಳು ಯಾವುದು ಸರಿಯಿಲ್ಲ. ಇದರ ಆಧಾರದ ಮೇಲೆ ಆಸ್ತಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದರು.

ನಮ್ಮ ಸಂಘಟನೆ ಈ ಹಿಂದೆ ೨೦೦೫ ರಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಿ ವೈಜ್ಞಾನಿಕ ರೀತಿಯಲ್ಲಿ ತೆರಿಗೆಯನ್ನು ನಿಗದಿಪಡಿಸಲು ಪ್ರಯತ್ನ ಪಟ್ಟಿತ್ತು. ಅದರಂತೆ ತಿದ್ದುಪಡಿ ಕೂಡ ಆಗಿತ್ತು. ರಾಜ್ಯದಲ್ಲಿ ಇದು ಮಾದರಿಯು ಆಗಿತ್ತು. ಆದರೆ ಅನಂತರ ಇದು ಈಗ ಬದಲಾವಣೆಯಾಗಿದೆ. ಈ ಬದಲಾವಣೆ ತೆರಿಗೆದಾರರಿಗೆ ಹೊರೆಯಾಗಲಿದೆ. ಆದ್ದರಿಂದ ಹಳೆಯ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
2020-21ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ವರ್ಷದ ಅಂತ್ಯದಲ್ಲಿ ಶೇ.15 ರಷ್ಟು ಹೆಚ್ಚು ಕಟ್ಟಬೇಕೆಂದು ಸರ್ಕಾರ ಮತ್ತು ಮಹಾನಗರ ಪಾಲಿಕೆ ಸೂಚಿಸಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಸ್ತಿ ತೆರಿಗೆದಾರರಿಗೆ ಶೇ.30 ರವರೆಗೆ ವಿನಾಯಿತಿ ನೀಡಲಾಗಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಕೋವಿಡ್‌ನಂತಹ ಸಂದರ್ಭದಲ್ಲೂ ಕೂಡ ಶೇ.೧೫ ರಷ್ಟು ಹೆಚ್ಚಿನ ದರ ನಿಗದಿಪಡಿಸಿದೆ. ಈ ದರವನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.


ಹಾಗೆಯೇ ಕೋವಿಡ್‌ನ ಇಂತಹ ಸಂಕಷ್ಟದ ಸಂದರ್ಭದಲ್ಲಿ  ೨೦೨೧-೨೨ ನೇ ಸಾಲಿನ ತೆರಿಗೆಯಲ್ಲಿ ಶೇ.50 ರಷ್ಟು ವಿನಾಯಿತಿ ಕೊಡಬೇಕು ಮತ್ತು ಈ ವಿನಾಯಿತಿಗೆ ಈಡೀ ವರ್ಷ ಬಡ್ಡಿ ರಹಿತವಾಗಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಕಾನೂನು ಬದಲಾವಣೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಹಾಗೂ ಖಾಲಿ ನಿವೇಶನಗಳಿಗೂ ಎಸ್‌ಆರ್ ದರ ಆಧರಿಸಿ ಆಸ್ತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಬದಲಾವಣೆ ತರಲಾಗಿದೆ. ಇದು ಕೂಡ ಅವೈಜ್ಞಾನಿಕವಾಗಿದೆ. ಒಟ್ಟಾರೆ ತೆರಿಗೆದಾರರ ವಿರೋಧಿಯಾದ ಈ ಹೊಸ ರೀತಿಯ ಕಾನೂನು ತಿದ್ದುಪಡಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದರು.


ಸಾರ್ವಜನಿಕರು ತೆರಿಗೆ ಕಟ್ಟಬೇಕು ನಿಜ. ಆದರೆ ಕೇವಲ ಶೇ.೫ರಷ್ಟು ರಿಯಾಯಿತಿಗೋಸ್ಕರ ಅವಸರ ಮಾಡಬಾರದು. ನಾವು ತೆರಿಗೆ ಕಟ್ಟಬೇಡಿ ಎಂದು ಹೇಳುವುದಿಲ್ಲ. ಆದರೆ ಅದಕ್ಕಿನ್ನು ಸಮಯವಿದೆ. ಎಲ್ಲರೂ ಸೇರಿ ಈ ಅವೈಜ್ಞಾನಿಕ ರೀತಿಯ ತೆರಿಗೆಯ ವಿರುದ್ಧ ಹೋರಾಡಬೇಕಿದೆ. ಇಲ್ಲದೆ ಹೋದರೆ ತೆರಿಗೆ ಕಟ್ಟುವುದೆ ಕಷ್ಟವಾಗುವಂತಹ ಕಾಲ ಬರುತ್ತದೆ ಎಂದು ಮನವಿ ಮಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸ್ತಿ ತೆರಿಗೆದಾರರ ಈ ಸಮಸ್ಯೆಯನ್ನು ಸೌಹಾರ್ದಿತವಾಗಿ ಮಾತುಕತೆಯ ಮೂಲಕ ಬಗೆ ಹರಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ  ಒಕ್ಕೂಟದ ಅಧ್ಯಕ್ಷ ಬಿ.ವಿ.ಗೋಪಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ.ಅಶೋಕ್‌ಕುಮಾರ್, ಪದಾಧಿಕಾರಿಗಳಾದ ಹೆಚ್.ಮಹಮ್ಮದ್‌ಇಕ್ಬಾಲ್ (ನೇತಾಜಿ), ಸುಬ್ರಮಣ್ಯ, ಎನ್.ಎಂ.ವೆಂಕಟೇಶ್ ಇದ್ದರು.

Ad Widget

Related posts

ನೆಹರೂ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ  ಸಿ.ಟಿ. ರವಿಗೆ ಇಲ್ಲ : ಬೇಳೂರು ಗೋಪಾಲ ಕೃಷ್ಣ

Malenadu Mirror Desk

ಮಧು ಬಂಗಾರಪ್ಪ ಅದ್ದೂರಿ ಸ್ವಾಗತಕ್ಕೆ ಸಿದ್ದತೆ
ಮೇ ೩೧ ರಂದು ನಗರಕ್ಕೆ ಆಗಮಿಸುವ ಸಚಿವರು

Malenadu Mirror Desk

ಜನರ ಸಂಕಷ್ಟ ದೂರ ಮಾಡಲು ಕಾಂಗ್ರೆಸ್ ಗೆಲ್ಲಿಸಿ, ಹಂಚಿ ಪ್ರಚಾರ ಸಭೆಯಲ್ಲಿ ಮಧುಬಂಗಾರಪ್ಪ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.