ಹೊಸನಗರದಲ್ಲಿ ಕಳೆದ 24 ಗಂಟೆಗಳಲ್ಲಿ 320 ಮಿಲಿ ಮೀಟರ್ ಮಳೆ
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲಿ ಮುಂಗಾರು ಮಳೆ ಹಂಗಾಮವೇ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ ಮಲೆನಾಡು ಅಕ್ಷರಷಃ ಮಳೆನಾಡಾಗಿದೆ. ಎತ್ತ ನೋಡಿದರೂ ನೀರು.. ನೀರು.. ಗಿರಿಶ್ರೇಣಿಗಳಲ್ಲಿ ಮಳೆಗಾಲದಲ್ಲಿ ಮಾತ್ರ ಕಾಣ ಸಿಗುವ ಝರಿ ಮತ್ತು ಚಿಕ್ಕ ಜಲಪಾತಗಳು ಜೀವಪಡೆದುಕೊಂಡಿವೆ. ದಕ್ಷಿಣದ ಚಿರಾಪುಂಜಿ ಆಗುಂಬೆಯನ್ನು ಈಗಾಗಲೇ ಹಿಂದಿಕ್ಕಿರುವ ಹೊಸನಗರದಲ್ಲಿ ಕಳೆದ 24 ಗಂಟೆಗಳಲ್ಲಿ 320 ಮಿಲಿ ಮೀಟರ್ ಮಳೆಯಾಗಿದೆ. ಇದು ಹೊಸನಗರ ಇತಿಹಾಸದಲ್ಲಿಯೇ ದಾಖಲೆಯ ಮಳೆಯಾಗಿದೆ
ಮುಂಗಾರುಮಳೆ ಒಂದೇ ಸಮನೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳೂ ತೊಂದರೆಯಾಗಿದ್ದು, ಹಂಕಲು ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಶೇಂಗಾ ಇತ್ಯಾದಿ ಬೆಳೆಗಳ ಬಿತ್ತನೆಗೆ ತೊಂದರೆಯಾಗಿದೆ. ಎಡಬಿಡದೆ ಸುರಿದ ಮೃಗಶಿರ ಮಳೆಯಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಕೆರೆಕಟ್ಟೆಗಳ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಸೊರಬ,ಸಾಗರ, ತೀರ್ಥಹಳ್ಳಿಯಲ್ಲಿ ವ್ಯಾಪಕ ಮಳೆಯಾಗಿದ್ದು,ಮನೆಯೊಂದು ಕುಸಿದಿರುವ ಬಗ್ಗೆ ವರದಿಯಾಗಿದೆ.
ಕೊಪ್ಪ , ಶೃಂಗೇರಿ ಹಾಗೂ ನರಸಿಂಹರಾಜಪುರ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ತುಂಗಾ ಹಾಗೂ ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ಗಾಜನೂರು ಡ್ಯಾಂ ಒಳಹರಿವು ಹೆಚ್ಚಾಗಿದ್ದು, ಡ್ಯಾಮಿನಿಂದ 33700 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಕೋರ್ಪಲಯ್ಯನ ಛತ್ರದ ಸಮೀಪದ ಮಂಟಪ ಮುಳುಗಿದೆ. ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿರುವುದರಿAದ ನದಿಗೆ ಹೆಚ್ಚು ನೀರು ಬಿಡುವ ಸಾಧ್ಯತೆಯಿದ್ದು, ನದಿ ಇಕ್ಕೆಲಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹೊಸನಗರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಶರಾವತಿ ನದಿಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಸಾಗರ ಸುತ್ತಮುತ್ತ ಹೆಚ್ಚು ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಜೋಗಜಲಪಾತಕ್ಕೆ ಕಳೆಬಂದಿದ್ದು, ಜಲಪಾತದಲ್ಲಿ ದುಮ್ಮಿಕ್ಕುವ ಜಲಧಾರೆ ಕಣ್ಮನ ಸೆಳೆಯುತ್ತಿದೆ.
ತಾಲೂಕುವಾರು ಮಳೆ ವಿವರ:
ಶಿವಮೊಗ್ಗ-16.40 ಮಿ.ಮೀ.ಭದ್ರಾವತಿ-9.20ಮಿ.ಮೀ.ತೀರ್ಥಹಳ್ಳಿ-77.20 ಮಿ.ಮೀ.ಸಾಗರ-56.60 ಮಿ.ಮೀ.ಶಿಕಾರಿಪುರ- 15.20ಮಿ.ಮೀ.ಸೊರಬ-48.10 ಮಿ.ಮೀ.ಹೊಸನಗರ-320 ಮಿ.ಮೀ.