Malenadu Mitra
ರಾಜ್ಯ ಶಿವಮೊಗ್ಗ

ಸಹ್ಯಾದ್ರಿ ಕ್ಯಾಂಪಸ್‍ಗಾಗಿ ವಿದ್ಯಾರ್ಥಿಗಳೊಂದಿಗೆ ನಿರಂತರ ಬೀದಿ ಹೋರಾಟ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಿರ್ಮಿಸಲುದ್ದೇಶಿಸಿರುವ ವಿಶೇಷ ಕ್ರೀಡಾ ತರಬೇತಿ ಕೇಂದ್ರವನ್ನು ಕೈಬಿಡದಿದ್ದರೆ ವಿದ್ಯಾರ್ಥಿಗಳೊಂದಿಗೆ ಸೇರಿ ಬೀದಿ ಹೋರಾಟ ಆರಂಭಿಸಲಾಗುವುದು ಎಂದು ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ಸಮಿತಿಯ ಮುಖಂಡ ಎಂ. ಗುರುಮೂರ್ತಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಸಂಸದ ಬಿ ವೈ ರಾಘವೇಂದ್ರ ಅವರು ಇತ್ತೀಚೆಗೆ ಈ ಸಂಬಂಧ ಕರೆದಿದ್ದ ಹೋರಾಟಗಾರರ ಸಭೆಯಲ್ಲಿ ಅವರಿಗೆ ವಿರೋಧ ಏಕೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಆದರೆ ಮಾಧ್ಯಮದ ಮುಂದೆ ಅವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಜೊತೆಗೆ ಹೋರಾಟಗಾರರಿಗೆ ಮಾಹಿತಿ ಕೊರತೆ ಕಾರಣ ವಿರೋಧಿಸುತ್ತಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದರು.
ಯಾವ ಕಾರಣಕ್ಕೂ ಅಲ್ಲಿ ಕ್ರೀಡಾ ತರಬೇತಿ ಕೇಂದ್ರ ಆರಂಭಕ್ಕೆ ಅವಕಾಶ ಕೊಡುವುದಿಲ್ಲ. ಒಂದು ಶೈಕ್ಷಣಿಕ ಸಂಸ್ಥೆಯ ವಾತಾವರಣವನ್ನು ಅಥವಾ ಪರಿಸರವನ್ನು ಬಲಿಗೊಟ್ಟು ಅಲ್ಲಿಯೇ ಈ ಕೇಂದ್ರ ಆರಂಭಿಸುವ ಉದ್ದೇಶವಾದರೂ ಏನು. ಶಿವಮೊಗ್ಗದಲ್ಲಿ ಅಥವಾ ಸುತ್ತಮುತ್ತ ನೂರಾರು ಎಕರೆ ಸರಕಾರಿ ಜಾಗವಿದೆ. ಅಲ್ಲಿ ಈ ಕೇಂದ್ರವನ್ನು ಅಭಿವೃದ್ಧಿ ಮಾಡಿ. ಸಹ್ಯಾದ್ರಿ ಕಾಲೇಜು ಇನ್ನೂ ಅಭಿವೃದ್ಧಿಯಾಗಬೇಕಿದೆ. ಆಧುನಿಕ ಮಾದರಿಯ ಕಾಲೇಜನ್ನಾಗಿ ಪರಿವತಿರ್ಸಬೇಕಿದೆ. ಡಿಜಿಟಲ್ ಲೈಬ್ರರಿ, ಹೆಚ್ಚುವರಿ ಹಾಸ್ಟೆಲ್, ಸಭಾಂಗಣ, ವಿವಿಧ ಕೋರ್ಸುಗಳಿಗೆ ಪ್ರತ್ಯೇಕ ಕಟ್ಟಡ ಮೊದಲಾದವುಗಳ ಅವಶ್ಯಕತೆ ಇದೆ. ಇದನ್ನೆಲ್ಲ ಮಂಜೂರು ಮಾಡಿಸಿ ಉತ್ತಮ ಸೌಲಭ್ಯ ಒದಗಿಸುವ ಕೆಲಸವನ್ನು ಸಂಸದರು ಮತ್ತು ಬಿಜೆಪಿಯವರು ಮಾಡಬೇಕಿದೆ ಎಂದರು.
ಇಷ್ಟೆಲ್ಲಾ ವಿಷಷಯ ಗೊತ್ತಿದ್ದರೂ ಸಂಸದರು ಅದೇ ಜಾಗವನ್ನೇ ಮತ್ತೆ ಕೊಡಲು ಮುಂದಾಗಿದ್ದಾರೆ. ಒಂದು ಕಾಲೇಜಿಗೆ ಏನೇನು ಬೇಕೋ ಅದನ್ನೆಲ್ಲ ಮೊದಲು ಒದಗಿಸಲಿ. ಅದನ್ನು ಅಭಿವೃದ್ಧಿಗೊಳಿಸಿ. ಸಾಯ್ ಸಂಸ್ಥೆಯ ಕ್ರೀಡಾ ಸಂಕೀರ್ಣ ನಗರದೊಳಕ್ಕೆ ಬರಬೇಕೆಂದೇನಿಲ್ಲ. ಸ್ಮಾರ್ಟ್‌ಸಿಟಿಯಿಂದ ಅನುದಾನ ಪಡೆದಿರುವ ಹಿನ್ನೆಲೆಯಲ್ಲಿ ಈ ಜಾಗದ ಮೇಲೆ ಕಣ್ಣು ಹಾಕಲಾಗಿದೆ. ಇನ್ನು ಬಿಟ್ಟು ನಗರದೊಳಕ್ಕೆ ಬೇರೆ ಕಡೆ ಸ್ಥಾಪಿಸಿ ಎಂದರು.
ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಅದರಲ್ಲೂ ಹಳ್ಳಿಗಾಡಿನವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇಂತಹ ಉತ್ತಮ ಜಾಗವನ್ನು ವಶಪಡಿಸಿಕೊಳ್ಳಲು ಬರಬೇಡಿ. ಯಾವ ಕಾರಣಕ್ಕೂ ಅದಕ್ಕೆ ಅವಕಾಶ ಕೊಡುವುದಿಲ್ಲ. ಮಾಹಿತಿ ಕೊರತೆ ನಮಗಿಲ್ಲ. ಪ್ರತಿ ವಿಷಯವನ್ನು ಅರ್ಥ ಮಾಡಿಕೊಂಡು ಮಾತನಾಡಿ. ಹೋರಾಟಗಾರ ಬಗ್ಗೆ ಸುಳ್ಳು ಹೇಳಿಕೆ ಕೊಡಬೇಡಿ ಎಂದರು.
ನಿವೃತ್ತ ಪ್ರೊ. ಸಣ್ಣರಾಮ ಮಾತನಾಡಿ, ಈ ವಿದ್ಯಾಸಂಸ್ಥೆಯ ಜಾಗದಲ್ಲಿ ಸರಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಅವಶ್ಯವಿರುವ ಕಟ್ಟಡ ಮತ್ತು ಕೋರ್ಸುಗಳನ್ನು ಸ್ಥಾಪಿಸಬೇಕು. ಆ ಮೂಲಕ ಒಂದು ಮಾದರಿ ವಿದ್ಯಾಸಂಸ್ಥೆಯಾಗಿ ಸಹ್ಯಾದ್ರಿ ಕಾಲೇಜು ಬೆಳೆಯುವಂತೆ ಮಾಡಬೇಕೇ ವಿನಾ ಇದರ ಜಾಗವನ್ನು ಇನ್ನೊಂದು ಸಂಸ್ಥೆಗೆ ಕೊಡುವುದು ಉಚಿತವಲ್ಲ ಎಂದರು. ವಿದ್ಯಾರ್ಥಿ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ ಸಹ್ಯಾದ್ರಿ ಕ್ಯಾಂಪಸ್‌ನ್ನು ಉಳಿಸಲು ಬದ್ಧರಾಗಿರುವುದಾಗಿ ಘೋಷಿಸಿದರು.
ಕೆ ಪಿ ಶ್ರೀಪಾಲ್ ಹಾಜರಿದ್ದರು.


ಸಂಸದ ರಾಘವೇಂದ್ರ ಅವರ ಒತ್ತಡಕ್ಕೆ ಜಿಲ್ಲಾಧಿಕಾರಿ ಡಿಸಿ ಶಿವವಕುಮಾರ್ ಮಣಿದಿದ್ದಾರೆ. ಅವರು ಸ್ವತಂತ್ರರಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಜನರ ಅಭಿಲಾಷೆಯಂತೆ ಯಾವುದೇ ಯೋಜನೆ ರೂಪಿಸಬೇಕೇ ವಿನಾ ರಾಜಕಾರಣಿಗಳ ಅಭಿಪ್ರಾಯದಂತೆ ಅಲ್ಲ. ಜಿಲ್ಲಾಧಿಕಾರಿ ಇನ್ನಾದರೂ ಈ ರೀತಿಯ ಯೋಚನೆ ಕೈಬಿಡಬೇಕು. ಐತಿಹಾಸಿಕವಾದ ಈ ಜಾಗವನ್ನು ಉಳಿಸುವತ್ತ ಅವರು ಕೈಜೋಡಿಸಬೇಕು. ಜನರ ಹೋರಾಟದ ದಿಕ್ಕನ್ನು ತಪ್ಪಿಸುವ ಕೆಲಸಕ್ಕೆ ಕೈ ಹಾಕಬಾರದು.

ಟಿ. ಎಂ. ಅಶೋಕ್ ಯಾದವ್

ಹೋರಾಟ ಅನಿವಾರ್‍ಯ

ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣವನ್ನು ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಪ್ರಾಧಿಕಾರಕ್ಕೆ ವಹಿಸಲು ಸಂಸದ ಬಿ ವೈ ರಾಘವೇಂದ್ರ ಮುಂದಾಗಿರುವುದು ಖಂಡನೀಯ. ಒಂದು ವೇಳೆ ಇದನ್ನು ಅವರು ಕೈಬಿಡದಿದ್ದರೆ ಆಂದೋಲನ ಪ್ರಾರಂಭಿಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಬಗ್ಗೆ ಮಾತನಾಡಿದ ಫ್ರಂಟ್ ಜಿಲ್ಲಾಧ್ಯಕ್ಷ ಮುಜಾಹಿದ್, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಸಹ್ಯಾದ್ರಿ ಕಾಲೇಜಿಗೆ ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳು ದಾಖಲಾಗುವ ಸಂಭವವಿದೆ. ಇದನ್ನೆಲ್ಲ ಅರಿತು ಹೊಸ ಮೂಲಸೌಕರ್‍ಯ ಕಲ್ಪಿಸಿಕೊಡುವ ಕೆಲಸವಾಗಬೇಕಿದೆ. ಅದನ್ನು ಬಿಟ್ಟು ಇರುವ ಜಾಗವನ್ನೇ ಇನ್ನೊಬ್ಬರಿಗೆ ಕೊಡಹೊರಟಿರುವುದು ಸರಿಯಲ್ಲ ಎಂದರು.

ನಗರದ ಅಂಚಿನಲ್ಲಿ ಸುಮಾರು ೧೦೦ ಎಕ್ರೆ ಜಾಗದಲ್ಲಿ ತಲೆಎತ್ತಿರುವ ಈ ಸುಂದರ ಶೈಕ್ಷಣಿಕ ಪರಿಸರವನ್ನು ಯಾವ ಕಾರಣಕ್ಕೂ ಹಾಳುಮಾಡಬಾರದು. ಇದರೊಳಕ್ಕೆ ಅನ್ಯ ಸಂಸ್ಥೆಗೆ ಪ್ರವೇಶ ಸಲ್ಲದು. ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಜಾಗ ಮಿಸಲಿಡಲಿ. ಕಾಲೇಜಿನ ನೋಟವನ್ನು ಇನ್ನಷ್ಟು ಭವ್ಯಗೊಳಿಸಬೇಕಾದುದು ಸಂಸದರ ಕರ್ತವ್ಯ ಎಂದರು.
ಕಾಲೇಜಿಗೆ ಹೊಡೆತ ಬೀಳುವಂತಹ ಯಾವ ಕೆಲಸವನ್ನೂ ಇಲ್ಲಿ ಸಂಸದರು ಮಾಡಬಾರದು. ಜನರು ಇಷ್ಟೊಂದು ಪ್ರತಿಭಟಿಸುತ್ತಿದ್ದರೂ ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ನಿಲುವನ್ನೇ ಸಮರ್ಥಿಸಿಕೊಳುತ್ತಿದ್ದಾರೆ. ಇದನ್ನು ಕೈಬಿಟ್ಟು ಬೆರೆಡೆ ಈ ಯೋಜನೆಯನ್ನು ಸ್ಥಳಾಂತರಿಸಬೇಕು. ಒಂದು ವೇಳೆ ಬದಲಿಸದಿದ್ದರೆ ಆಂದೋಲನ ಆರಂಭಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಫ್ರಂಟ್‌ನ ಜಿಲ್ಲಾ ಕಾಯದರ್ಶಿ ಲಿಕ್ಮಾನ್, ಉಪಾಧ್ಯಕ್ಷ ಮುಶೈದ್, ಸದಸ್ಯರಾದ ದಾದಾಪೀರ್, ಅಫ್ರೋಜ್ ಮೊದಲಾದವರಿದ್ದರು.

Ad Widget

Related posts

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ: ಕೇಂದ್ರಕ್ಕೆ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Malenadu Mirror Desk

ಕುಮಾರಬಂಗಾರಪ್ಪ ಸರ್ವಾಧಿಕಾರಿ ಧೋರಣೆಯಿಂದ ಚಂದ್ರಗುತ್ತಿ ಜಾತ್ರೆಯಲ್ಲಿ ಅಸ್ತವ್ಯಸ್ತ: ಹುಲ್ತಿಕೊಪ್ಪ ಶ್ರೀಧರ್

Malenadu Mirror Desk

ಕಲ್ಲುತೂರಾಟ ಖಂಡಿಸಿ ಅ.12 ಕ್ಕೆ ಬಿಜೆಪಿ ಪ್ರತಿಭಟನಾ ಸಭೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.