ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಷರತ್ತಿಗೊಳಪಟ್ಟು ವ್ಯಾಪಾರ ವಹಿವಾಟು ನಡೆಸಲು ಅನುಮತಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಭಾನುವಾರ ವಾಣಿಜ್ಯೋದ್ಯಮಿಗಳು ಹಾಗೂ ವಿವಿಧ ವೃತ್ತಿಬಾಂಧವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಕೆಲ ವಹಿವಾಟುಗಳು ಮಧ್ಯಾಹ್ನ 12 ಗಂಟೆತನಕ ಮತ್ತೆ ಕೆಲವಕ್ಕೆ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ಈ ಷರತ್ತು ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಸೀಮಿತವಾಗಿವೆ. ಉಳಿದ ತಾಲೂಕುಗಳಿಗೆ ರಾಜ್ಯದ 16 ಜಿಲ್ಲೆಗಳಲ್ಲಿರುವ ಅನ್‍ಲಾಕ್ ನಿಯಮ ಅನ್ವಯವಾಗುತ್ತದೆ ಎಂದು ಹೇಳಿದರು.
ಗುಂಪುಗೂಡಿದರೆ ಕೇಸ್
ಯಾವುದೇ ಅಂಗಡಿ ಮುಂಗಟ್ಟಿನ ಮುಂದೆ ಜನ ಗುಂಪುಗೂಡಿದರೆ ಅಂಗಡಿ ಮಾಲೀಕರ ಮೇಲೆ ಕೇಸ್ ಹಾಕುವುದಲ್ಲದೆ, 15 ದಿ ಅಂಗಡಿ ಬಂದ್ ಮಾಡಲಾಗುವುದು. ಸಾಮಾಜಿಕ ಅಂತರ ಸೇರಿದಂತೆ ಕೊರೊನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಇಷ್ಟು ದಿನ ಜಿಲ್ಲೆಯಲ್ಲಿ ಸಹಕರಿಸಿದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಅಂಗಡಿ ಮುಂದೆ ಜನ ಸೇರಿದರೆ ಅಂಗಡಿ ಮಾಲೀಕರೆ ಹೊಣೆ ಎಂದು ಈಶ್ವರಪ್ಪ ಎಚ್ಚರಿಸಿದರು.
ಕಲ್ಯಾಣ ಮಂದಿರವಿಲ್ಲ:
ಕಲ್ಯಾಣ ಮಂದಿರಗಳಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಅದೇ ರೀತಿ ಸವಿತಾ ಸಮಾಜದವರಿಗೂ ಸಲೂನ್ ಓಪನ್ ಮಾಡಲು ಅವಕಾಶ ನೀಡುವುದಿಲ್ಲ. ಗಿರಿವಿ ಅಂಗಡಿಯವರು ವಹಿವಾಟು ನಡೆಸಬಹುದು. ಆದರೆ ಚಿನ್ನ ಮಾರಾಟ ಮಾಡುವಂತಿಲ್ಲ. ಗಾಂಧಿಬಜಾರಿನ ಹೋಲ್ ಸೇಲ್ ಅಂಗಡಿಯವರು ಮಧ್ಯಾಹ್ನ 12 ಗಂಟೆ ತನಕ ತೆರೆಯಬಹುದು.ಹಾಪ್ ಕಾಮ್ಸ್ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಈಶ್ವರಪ್ಪ ಹೇಳಿದರು.
ಆಹಾರ ಮಾರುವಂತಿಲ್ಲ:
ಬೀದಿಬದಿ ವ್ಯಾಪಾರಸ್ಥರಿಗೆ ಮಧ್ಯಾಹ್ನ 12 ಗಂಟೆತನಕ ಅವಕಾಶವಿದೆ. ಆದರೆ ಬೀದಿಬದಿಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಟೈಲರ್ ಅಂಗಡಿಗಳು ಹೊಲಿಗೆ ಮಾಡಬಹುದು ಆದರೆ ಬಟ್ಟೆ ವ್ಯಾಪಾರ ಮಾಡುವಂತಿಲ್ಲ.
ಕೊರೊನ ಲಸಿಕೆ:
ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಸೋಮವಾರದಿಂದ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುವುದು. ಈಗಾಗಲೇ ಬೇರೆ ಬೇರೆ ವಲಯದಲ್ಲಿಕೆಲಸ ಮಾಡುವ ಕಾರ್ಮಿಕರಿಗೆ ಲಸಿಕೆ ಹಾಖಲಾಗುತ್ತಿದೆ. ಈ ಬಗ್ಗೆ ಡಿಎಚ್‍ಒ ಬಳಿ ಮೊದಲೇ ಮಾಹಿತಿ ನೀಡಿ ಲಸಿಕೆ ಪಡೆದುಕೊಳ್ಳಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.