ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದ ಅನುಭವವನ್ನು ನೀಡುವುದು ಸ್ವಾತಂತ್ರ್ಯೋತ್ಸವದ ಗುರಿಯಾಗಬೇಕು ಎಂದು ಸಾಗರದ ಶ್ರೀಮತಿ ಇಂದಿರಾಗಾಂಧಿ ಮಹಿಳಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿನೋದ್ ಪ್ರಕಾಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ, ಭಾರತ ಸ್ವಾತಂತ್ರ್ಯೋತ್ಸವ ವರ್ಷಾಚರಣೆ ಸಮಿತಿ ಶಿವಮೊಗ್ಗ, ನೆಹರು ಯುವಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಭಾರತ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯದ ಅನುಭವವನ್ನು ನೀಡಬೇಕಾಗಿದೆ. ಅನೇಕ ಸಾಮಾಜಿಕ ವಿಕೃತಿಗಳಿಗೆ ಬಲಿಯಾಗಿ ಸಾಮಾಜಿಕ ಸ್ವಾತಂತ್ರ್ಯದ ಅನುಭವದಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯವನ್ನು ನೀಡಬೇಕಾಗಿದೆ. ಇದೆಲ್ಲದರ ಜೊತೆ ಅವರು, ಕೋಟ್ಯಾಂತರ ಕ್ರಾಂತಿವೀರ ಯುವಕರ ತ್ಯಾಗ-ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ಯಾವಾಗ ಒಂದು ದೇಶ ಸಾಮಥ್ರ್ಯಹೀನವಾಗುತ್ತೋ ಆಗೆಲ್ಲಾ ಸ್ವಾತಂತ್ರ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಅದು ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ, ತಾಂತ್ರಿಕ ಸ್ವಾತಂತ್ರ್ಯ. ಈ ಎಲ್ಲಾ ಸ್ವಾತಂತ್ರ್ಯಗಳ ರಕ್ಷಣೆ ಇವತ್ತಿಗೂ ಅಷ್ಟೇ ಮಹತ್ವದ್ದು. ಇಂತಹ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಿಕೊಂಡು ಮುಂದುವರೆಸಲು ನಮಗೆ ಸ್ವಾತಂತ್ರ್ಯ ಚಳುವಳಿಯ ನೆನಪು ಮುಖ್ಯ. ಈ ಸ್ವಾತಂತ್ರದ ಎಲ್ಲಾ ಧಾರೆಗಳಿಗೆ ಇತಿಹಾಸದಲ್ಲಿ ಸಾಕಷ್ಟು ಸ್ಥಾನಮಾನ ಕಲ್ಪಿಸಿ ಪೂರ್ಣ ಸ್ವಾತಂತ್ರದ ಹೋರಾಟದ ಸ್ವರೂಪವನ್ನು ನಾಡಿನ ಯುವಜನತೆಯ ಮುಂದಿಡಲು ಸಾಧ್ಯವಾಗಿಲ್ಲ. ಅಂತಹ ಕಾರ್ಯ ಈ 75ರ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಆಗಬೇಕಾಗಿದೆ ಎಂದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಮಾತನಾಡಿದ ಅವರು ಯೋಗ ಎನ್ನುವ ಅದ್ಭುತವಾದ ಜೀವನ ಮಂತ್ರವನ್ನು ಭಾರತ ಪ್ರಪಂಚಕ್ಕೆ ನೀಡಿದೆ. ವಿಶ್ವಸಂಸ್ಥೆಯ ಇತಿಹಾಸದಲ್ಲಿಯೇ ಮೊದಲ ಬಾರಿ 170ಕ್ಕೂ ಹೆಚ್ಚಿನ ದೇಶಗಳಿಂದ ಸ್ವೀಕೃತ ಗೊಂಡು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಧಿಕೃತವಾಗಿ ಘೋಷಣೆಗೊಂಡಿದ್ದು ಭಾರತದ ಹಿರಿಮೆಗೆ ಸಿಕ್ಕ ಗೌರವ. ಜಗತ್ತಿನ ಹಲವಾರು ದೇಶಗಳ ಕೋಟ್ಯಾಂತರ ಮಂದಿ ಯೋಗವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರೋಣ ಎಂದರು.
ಶಿವಮೊಗ್ಗದ ಶ್ರೀ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಶ್ರೀ ರುದ್ರಾರಾಧ್ಯ ಮತ್ತು ತಂಡ ಯೋಗ ಉಪಸ್ಯಾಸ ಮತ್ತು ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುವೆಂಪು ವಿವಿ ಎನ್ ಎಸ್ ಎಸ್ ಕೋ ಆರ್ಡಿನೇಟರ್ ಡಾ.ಪರಿಸರ ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ನೆಹರು ಯುವಕೇಂದ್ರ ಅಧಿಕಾರಿ ಉಲ್ಲಾಸ್ ಮತ್ತಿತರರು ಉಪಸ್ಥಿತರಿದ್ದರು.