ಶಿವಮೊಗ್ಗ ನಗರದಲ್ಲಿರುವ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು.
ಅವರು ಬುಧವಾರ ಗೋಪಾಳದಲ್ಲಿ 14ಎಕ್ರೆ ವ್ಯಾಪ್ತಿಯನ್ನು ಹೊಂದಿರುವ ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಚಟುವಟಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮೂರು ದಶಕಗಳ ಹಿಂದೆ ಆರಂಭವಾಗಿರುವ ರಾಜ್ಯದ ವಸತಿಯುಕ್ತ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ದುಸ್ಥಿತಿಯಲ್ಲಿದೆ. ಹಲವು ಕಟ್ಟಡಗಳಲ್ಲಿ ಮಳೆ ನೀರು ಸೋರುತ್ತಿದ್ದು, ಅದನ್ನು ಸರಿಪಡಿಸಬೇಕಾಗಿದೆ. ಕ್ಯಾಂಪಸ್‌ನ ಒಳಗೆ ರಸ್ತೆ, ಒಳಚರಂಡಿ, ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದೇ ರೀತಿ ವಿದ್ಯಾರ್ಥಿನಿಯರ ಹಾಸ್ಟೆಲ್ ದುರಸ್ತಿ, ಶಿಕ್ಷಕ ವರ್ಗದ ವಸತಿ ದುರಸ್ತಿ ಹಾಗೂ ನೂತನ ವಸತಿ ಸಮುಚ್ಛಯ ನಿರ್ಮಾಣ ಕಾರ್ಯ, ಕಾಲೇಜಿನ ಸುತ್ತಲೂ ವಿಶಾಲವಾದ ಕಂಪೌಂಡ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕಾಗಿದೆ. ಈ ಕುರಿತಾದ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಿ ಒಂದು ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಮಗಾರಿ ಆರಂಭವಾಗಬೇಕು. ಮುಂದಿನ ಒಂದು ವರ್ಷದ ಒಳಗಾಗಿ ಸುಸಜ್ಜಿತ ಮಾದರಿ ಪಾಲಿಟೆಕ್ನಿಕ್ ಕಾಲೇಜು ಇಲ್ಲಿ ಆರಂಭವಾಗಬೇಕು ಎಂದು ಅವರು ಸೂಚನೆ ನೀಡಿದರು.
ವಿದ್ಯಾರ್ಥಿನಿಯರ ಹಾಸ್ಟೆಲ್‌ನ ನೆಲಹಾಸು ಹಾಳಾಗಿರುವ ಕಡೆಗಳಲ್ಲಿ ಹೊಸದಾಗಿ ನೆಲಹಾಸು ಅಳವಡಿಸಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಇನ್ನುಳಿದಂತೆ ಕಾಲೇಜಿಗೆ ಅಗತ್ಯವಿರುವ ಪ್ರಯೋಗಾಲಯ, ಸಿಬ್ಬಂದಿ ಸೇರಿದಂತೆ ಕಾಲೇಜಿನ ಉನ್ನತೀಕರಣ ಕಾರ್ಯವನ್ನು ಇಲಾಖೆ ವತಿಯಿಂದ ಕೈಗೊಳ್ಳಬೇಕು. ಕಾಲೇಜಿನ ಸಮಗ್ರ ಅಭಿವೃದ್ಧಿ ಕುರಿತು ಸಂಬAಧಪಟ್ಟ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಪಾಲಿಟೆಕ್ನಿಕ್ ಕಾಲೇಜನ್ನು ಇಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಟ್ಯಾಬ್ ವಿತರಣೆ
ರಾಜ್ಯ ಸರ್ಕಾರದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುವ ಯೋಜನೆಗೆ ಸಂಸತ್ ಸದಸ್ಯರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಈ ಮೊದಲು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಶ್ರೀಕಾಂತ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಬಿ.ವೈ.ಅರುಣಾ ದೇವಿ, ಕಾಲೇಜಿನ ಪ್ರಾಂಶುಪಾಲೆ ಉಮಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.