ಶಾಸಕರ ಶೇ. 10 ವ್ಯವಹಾರ: ಗೋಪಾಲಕೃಷ್ಣ ಬೇಳೂರು
ಸಾಗರ : ಕಾಗೋಡು ಚಳವಳಿಯ ನೆಲದಲ್ಲಿ ಬಡಜನರು ಹಕ್ಕುಪತ್ರಕ್ಕಾಗಿ ಬೀದಿಗಿಳಿದ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಸಂಗತಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಗರ ಕ್ಷೇತ್ರದಲ್ಲಿ ಜನರ ಹಿತ ನೋಡದೆ ಇರುವ ಭ್ರಷ್ಟ, ದುರಂಹಕಾರಿ ಜನನಾಯಕರು ಇರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಹಿಂದೆ ನಾನು ಶಾಸಕನಾಗಿದ್ದಾಗ, ಸಚಿವನಾಗಿದ್ದಾಗ ಜನರಿಗೆ ಭೂಮಿಹಕ್ಕು ಸಿಗಬೇಕು ಎನ್ನುವ ದೃಷ್ಟಿಯಲ್ಲಿ ಅನೇಕ ಕಾನೂನು ತಿದ್ದುಪಡಿಗಳನ್ನು ತಂದಿದ್ದೇನೆ. ಅದರ ಅನುಷ್ಟಾನ ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಬಗರ್‍ಹುಕುಂ, 94ಸಿ, 94ಸಿಸಿ ಸೇರಿದಂತೆ ಅನೇಕ ಯೋಜನೆಗಳಡಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಿಲ್ಲ. ಕೆಲವು ಕಡೆ ಹಕ್ಕುಪತ್ರ ಕೊಟ್ಟಿದ್ದರೂ ಅದು ಪಹಣಿಯಲ್ಲಿ ದಾಖಲು ಮಾಡಿಲ್ಲ. ಶಾಸಕರ ನಿರ್ಲಕ್ಷ್ಯಧೋರಣೆ ವಿರುದ್ದ ಜನಾಂದೋಲನದ ಮೂಲಕ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದ ಶಾಸಕರು ಜನಪರವಿಲ್ಲ. ತಮ್ಮ ಪಕ್ಷ ಹಾಗೂ ಕಾರ್ಯಕರ್ತರ ಅಭಿವೃದ್ದಿಗೆ ಶಾಸಕರಾಗಿ ಆಯ್ಕೆಯಾಗಿ ಬಂದಂತೆ ವರ್ತಿಸುತ್ತಿದ್ದಾರೆ. ಮೂರು ವರ್ಷದಿಂದ ಒಂದು ನಿವೇಶನ, ಒಂದು ಹಕ್ಕುಪತ್ರ ಕೊಡಲು ಆಗಿಲ್ಲ. ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಬಡವರಿಗೆ ಮನೆ ಬಂದಿದೆ ಎಂದು ಶಾಸಕರು ಹೇಳಿದ್ದರು. ಈತನಕ ಮನೆ ಹಂಚಿಕೆ ಮಾಡಿಲ್ಲ. ಆಶ್ರಯ ಮನೆ ಕಟ್ಟಿಕೊಂಡವರಿಗೆ ಈತನಕ ಹಣ ಬಿಡುಗಡೆ ಮಾಡಿಲ್ಲ. ಮೂರು ವರ್ಷದಿಂದ ಒಂದು ಮನೆ, ಹಕ್ಕುಪತ್ರ ಕೊಟ್ಟಿಲ್ಲ ಎಂದರೆ ಸರ್ಕಾರ, ಶಾಸಕರು ಏಕೆ ಬೇಕು ಎಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿದರು. ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು, ಮಹಿಳಾ ಅಧ್ಯಕ್ಷೆ ಮಧುಮಾಲತಿ, ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಎಲ್.ಚಂದ್ರಪ್ಪ, ಮಕ್ಬೂಲ್ ಅಹ್ಮದ್, ತಸ್ರೀಫ್, ತೀ.ನ.ಶ್ರೀನಿವಾಸ್, ಅಶೋಕ ಬೇಳೂರು, ಮಹಾಬಲ ಕೌತಿ, ಸುಧಾಕರ ಕುಗ್ವೆ, ಸರಸ್ವತಿ ನಾಗರಾಜ್, ಜ್ಯೋತಿ ಕೋವಿ, ಗಣಪತಿ ಮಂಡಗಳಲೆ ಮತ್ತಿತರರಿದ್ದರು.
ಸಿಎಂ ತವರಲ್ಲೇ ಚಿಕಿತ್ಸೆ ಸಿಗದೆ ಹಲವು ಜನರ ಸಾವು
ಕೊರೋನಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದ ಬಹುತೇಕ ಜನರು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಜನರು ಸತ್ತ ನಂತರ ಪರಿಹಾರ ಹುಡುಕುವ ಕೆಲಸವನ್ನು ಜಿಲ್ಲಾಡಳಿತ ಮಾಡಿರುವುದು ನಾಚಿಕೆಗೇಡಿನ ಕೆಲಸ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆಪಾದಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಗರದಲ್ಲಿ ಸಹ ಕೊರೊನಾ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಅಧಿಕಾರಿಗಳ ಸಭೆ ನಡೆಸಿದ್ದು ಬಿಟ್ಟರೇ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ವ್ಯಾಕ್ಸಿನ್ ಕೊಡುವ ವಿಚಾರದಲ್ಲಿ ಸಹ ಪಕ್ಷಪಾತಿ ಧೋರಣೆ ತಳೆದಿದ್ದು, ಬಿಜೆಪಿ ಮತ್ತು ಆರ್.ಎಸ್.ಎಸ್. ಕಾರ್ಯಕರ್ತರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡುವ ಮೂಲಕ ಶಾಸಕರು ಕೆಟ್ಟ ಸಂಸ್ಕøತಿಗೆ ನಾಂದಿ ಹಾಡಿದ್ದಾರೆ ಎಂದು ದೂರಿದರು.
ನಗರಸಭೆ ವತಿಯಿಂದ 31 ವಾರ್ಡ್‍ವ್ಯಾಪ್ತಿಯಲ್ಲಿ ಬಡಜನರಿಗೆ ಕಿಟ್ ವಿತರಣೆ ಮಾಡುವಲ್ಲಿ ಸಹ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ. ಶಾಸಕರು ಹೇಳಿದ ಅಂಗಡಿಯಲ್ಲಿ ಕಿಟ್‍ಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಅಷ್ಟುದೊಡ್ಡ ಮೊತ್ತದ ಹಣಕ್ಕೆ ಟೆಂಡರ್ ಕರೆದಿಲ್ಲ. ಇಲ್ಲಿಯೂ ಶಾಸಕರ ಶೇ. 10 ವ್ಯವಹಾರ ನಡೆಸಿದ್ದಾರೆ. ದಿನಸಿ ಕಿಟ್ ವಿತರಣೆ ಮಾಡುವಾಗ ಸಹ ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿ ಕೊಡಲಾಗಿದೆ ಎಂದರು.
.