ನಮ್ಮ ಸುತ್ತಲಿನ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅಂತರಾಷ್ಟ್ರೀಯ ಸ್ಪಂದನೆ ದೊರೆಯುತ್ತಿದ್ದು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ದೇಣಿಗೆ ನೀಡಿದ ಸಾರ್ಥಕತೆ ನಮಗಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ಟ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಶಿವಮೊಗ್ಗ ರೋಟರಿ ವತಿಯಿಂದ ಅಂತರಾಷ್ಟ್ರೀಯ ಅನುದಾನದಲ್ಲಿ 30ಲಕ್ಷ ರೂ. ವೆಚ್ಚದಲ್ಲಿ ಆಧುನಿಕರಣಗೊಂಡ ಪ್ರತಿಷ್ಟಿತ ರಾಷ್ಟ್ರೀಯ ಪ್ರೌಢಶಾಲೆಯನ್ನು ಎನ್‌ಇಎಸ್‌ಗೆ ಹಸ್ತಾಂತರಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿಯೇ ಇದು ಮೂರನೇ ಅಂತರಾಷ್ಟ್ರೀಯ ಯೋಜನೆಯಾಗಿದ್ದು ವಿದೇಶದಲ್ಲಿ ನೆಲೆಸಿರುವ ಅನೇಕ ದಾನಿಗಳು ಸ್ಪಂದಿಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳ ರೋಟರಿ ಸಹಕಾರದಿಂದ ಒಂದು ಕೋಟಿ ರೂ.ಗೂ ಹೆಚ್ಚು ಮೊತ್ತದ ಟ್ಯಾಬ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಶಾಲೆಗಳಿಗೆ ಕಂಪ್ಯೂಟರ್ಗಳನ್ನು ನೀಡುವ ತಯಾರಿಯಲ್ಲಿದ್ದೇವೆ. ಇಂದು ನವೀಕರಣಗೊಂಡ ಶಾಲೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ಪಲಿತಾಂಶ ಪಡೆಯಲು ಸಹಕಾರಿಯಾಗಲಿ ಎಂಬುದೇ ಎಲ್ಲರ ಉದ್ದೇಶ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಮಾತನಾಡಿ, ಎನ್‌ಇಎಸ್ ಸಂಸ್ಥೆಗೆ ಇಂದು ಮರೆಯಲಾಗದ ದಿನ. ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸಂಸ್ಥೆ ಮೂವತ್ತೈದು ಶಾಲಾ ಕಾಲೇಜುಗಳು ಹದಿನೇಳು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಹೆಮ್ಮರವಾಗಿ ಬೆಳೆಯಲು ಮೂಲ ಬೇರು ರಾಷ್ಟ್ರೀಯ ಪ್ರೌಢಶಾಲೆ. ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುವುದೇ ದೊಡ್ಡ ಸವಾಲಾಗಿದೆ. ಅದರೇ ಸಂಪೂರ್ಣ ಲಾಭ ನಷ್ಟಗಳ ಬಗ್ಗೆ ಚಿಂತಿಸಿದ ಎನ್‌ಇಎಸ್ ಎಲ್ಲಾ ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರೋಟರಿಯ ಸಹಕಾರ ಅವಿಸ್ಮರಣೀಯ. ಈ ಮೂಲಕ ಖಾಸಗಿ ಶಾಲೆಗಳ ಮಟ್ಟದಲ್ಲಿಯೇ ಸರ್ಕಾರಿ ಶಾಲೆಗಳನ್ನು ಪ್ರಸ್ತುತಪಡಿಸುವ ಗುರಿ ನಮ್ಮದಾಗಿದೆ.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಪಿ. ನಾರಾಯಣ ಮಾತನಾಡಿ, ರೋಟರಿಯ ಮೂಲಕ ಸಾಕಷ್ಟು ಸಾಮಾಜಿಕ ಸ್ಪಂದನೆ ನೀಡುವ ಕಾರ್ಯ ನಡೆಯುತ್ತಿದ್ದು ಅಂತರಾಷ್ಟ್ರೀಯವಾಗಿ ಹಲವಾರು ದಾನಿಗಳು ಸಹಕರಿಸಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಹೆಚ್.ಎಸ್. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್. ಅಶ್ವಥ ನಾರಾಯಣಶೆಟ್ಟಿ, ಸಹ ಕಾರ್ಯದರ್ಶಿಗಳಾದ ಅಮರೇಂದ್ರ ಕಿರೀಟಿ, ಖಜಾಂಚಿಗಳಾದ ಸಿ.ಆರ್. ನಾಗರಾಜ, ಕುಲಸಚಿವರಾದ ಪ್ರೋ.ಹೂವಯ್ಯ ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎನ್.ಎಂ. ರಮೇಶ್, ನಿಯೋಜಿತ ರೋಟರಿ ಅಧ್ಯಕ್ಷರಾದ ಎಂ.ಜಿ. ರಾಮಚಂದ್ರಮೂರ್ತಿ, ಸಹಾಯಕ ಗವರ್ನರ್ ಶ್ರೀಧರ್, ಪ್ರೊ.ಎ ಎಸ್ ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ವೀರಣ್ಣ ಹುಗ್ಗಿ, ಮುಖ್ಯೋಪದ್ಯಾಯರಾದ ಚಿಕ್ಕಪಿಂಚಾಲಯ್ಯ ಉಪಸ್ಥಿತರಿದ್ದರು.