Malenadu Mitra
ರಾಜ್ಯಶಿವಮೊಗ್ಗಹೊಸನಗರ

ದೇವಾ.. ಹೆಣ್ಣು ಹೆತ್ತವರಿಗೆ ಇದೆಂತಾ ಘೋರ ಅನ್ಯಾಯ, 20 ದಿನದ ಅಂತರದಲ್ಲಿ ಕರುಳ ಕುಡಿಗಳ ಕಳೆದುಕೊಂಡ ಕಾರ್ಮಿಕರು

ಇದು ಘೋರ ಅನ್ಯಾಯ, ಯಾವ ತಂದೆ ತಾಯಿಗೂ ಇಂತಹ ದುಃಖದ ಸನ್ನಿವೇಶ ಬರಬಾರದು. ಬೆವರು ಬಸಿದು ಸಾಕಿದ್ದ ಇಬ್ಬರು ಹೆಣ್ಣು ಮಕ್ಕಳು 20 ದಿನದ ಅಂತರದಲ್ಲಿ ದುರಂತ ಸಾವಿಗೀಡಾಗುತ್ತಾರೆಂದರೆ ಆ ಹೆತ್ತವರ ಸಂಕಟ ಎಷ್ಟಿರಬಹುದು. ವಿಧಿಯ ಇಂತಹ ಘೋರ ಅಟ್ಟಹಾಸಕ್ಕೆ ತುತ್ತಾದವರು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಕಾಫಿ ತೋಟದ ಕಾರ್ಮಿಕರಾದ ಉದಯ್ ಮತ್ತು ಅನಿತಾ ದಂಪತಿ.
ನಾಲ್ಕು ಜನ ಹೆಣ್ಣುಮಕ್ಕಳಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರನ್ನು ಕಳೆದುಕೊಂಡ ಉದಯ್ ದಂಪತಿ ಕುಸಿದು ಬಿದ್ದಾರೆ. ಈ ಎರಡೂ ಕರುಳ ಕುಡಿಗಳ ಸಾವು ಅನುಮಾನಾಸ್ಪದವಾಗಿರುವುದು ಆ ದಂಪತಿಯನ್ನು ಇನ್ನಷ್ಟು ದುಃಖದ ಮಡುವಿಗೆ ತಳ್ಳಿದೆ.

ಮಿಸ್‍ಕಾಲ್ ಪ್ರೀತಿ, ಕಿಡ್ನ್ಯಾಪ್ ಮದುವೆ

ಹಿರಿಮಗಳು ಸೌಂದರ್ಯ(21) ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಸಮೀಪದ ಕಾಡಿಗ್ಗೆರೆಯಲ್ಲಿ ಶುಕ್ರವಾರ ಅನುಮಾನಾಸ್ಪದವಾಗಿದೆ ಸಾವಿಗೀಡಾಗಿದ್ದಾಳೆ. ದುಡಿದು ನನ್ನ ಕಾಲಮೇಲೆ ನಿಂತು ನಂತರ ಮದುವೆಯಾಗುವೆ ಎಂದು ತಂಗಿಯನ್ನು ಮದುವೆ ಮಾಡಿದ್ದ ಸೌಂದರ್ಯ ಬದುಕು ಒಂದು ಮಿಸ್‍ಕಾಲ್‍ನಿಂದಾಗಿ ಅಂತ್ಯವಾಗಿದೆ. ಮಿಸ್‍ಕಾಲ್ ಮೂಲಕ ಪರಿಚಯವಾಗಿ, ಫೇಸ್‍ಬುಕ್ ಮೂಲಕ ಸಂಪರ್ಕಕ್ಕೆ ಬಂದಿದ್ದ ಕಾಡಿಗ್ಗೆರೆಯ ಉಮೇಶ್‍ನೊಂದಿಗೆ ಸೌಂದರ್ಯ ಏಳು ತಿಂಗಳ ಹಿಂದಷ್ಟೆ ಮದುವೆಯಾಗಿದ್ದಳು. ದಕ್ಷಿಣ ಕನ್ನಡ ಮೂಲದ ಪಡಗಾರ ಜಾತಿಯ ಉಮೇಶ್ ಹಾಗೂ ಒಕ್ಕಲಿಗ ಜಾತಿಯ ಸೌಂದರ್ಯ ಮನೆಯವರ ವಿರೋಧದ ನಡುವೆಯೇ ವಿವಾಹ ನೋಂದಣಿ ಮಾಡಿಕೊಂಡಿದ್ದರು.
ಪತಿಪತ್ನಿ ಅನೋನ್ಯವಾಗಿಯೇ ಇದ್ದರೆನ್ನಲಾಗಿದ್ದು, ಉಮೇಶ್ ತಾಯಿ ಮತ್ತು ತಂಗಿ ಸೌಂದರ್ಯಳೊಂದಿಗೆ ಹೊಂದಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಜಾತಿ ಕಾರಣಕ್ಕೆ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದಾರೆ ಎಂದು ಸೌಂದರ್ಯ ತವರು ಮನೆಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ.

ಅನುಮಾನಾಸ್ಪದ ಸಾವು: ಬಂಧನ

ಜೂ.25 ರಂದು ಉಮೇಶ್ ಹೊರಗೆ ಹೋಗಿದ್ದ ಸಂದರ್ಭ ಆತನ ತಾಯಿ ಮತ್ತು ತಂಗಿ ಫೋನ್ ಮಾಡಿ ಸೌಂದರ್ಯ ನೇಣುಹಾಕಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಸೌಂದರ್ಯ ಕುಟುಂಬದವರು ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಾರಣ. ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ಯೋಜನೆ ಮಾಡಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಉಮೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ತಂದೆ,ತಾಯಿ ಹಾಗೂ ತಂಗಿ ನಾಪತ್ತೆಯಾಗಿದ್ದಾರೆ. ಸೌಂದರ್ಯ ಸಾವು ಮೇಲ್ಕೋಟಕ್ಕೆ ಆತ್ಮಹತ್ಯೆ ಎಂದು ಹೇಳಲು ಬರುವುದಿಲ್ಲ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ನಡುವೆ ಈ ಪ್ರಕರಣದಲ್ಲಿ ನಗರದಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿಯೂ ನಡೆದಿದೆ. ಹಾಸನದ ರಾಜಕೀಯ ನಾಯಕರೂ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಉಮೇಶ್ ಸ್ನೇಹಿತರನ್ನೂ, ಪ್ರಕರಣಕ್ಕೆ ಸಂಬಂಧವೇ ಇರದ ಕೆಲವರನ್ನು ಈ ಪ್ರಕರಣದಲ್ಲಿ ಫಿಟ್ ಮಾಡುವ ಪ್ರಯತ್ನವಾಗುತ್ತಿದೆ, ಕೆಲ ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಎರಡನೇ ಮಗಳು ಐಶ್ವರ್ಯ

ಉದಯ್ -ಅನಿತಾ ದಂಪತಿ ತಮ್ಮ ಎರಡನೇ ಮಗಳು ಐಶ್ವರ್ಯ(19)ಳನ್ನು ಕಳೆದ ವರ್ಷ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಾವೇರಿಪುರದ ನಾಗರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಜೂ.8 ರಂದು ಆಕೆಯೂ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಳು. ಆಕೆಯನ್ನು ಗಂಡನೇ ಹೊಡೆದು ಕೊಲೆ ಮಾಡಿದ್ದಾನೆ ಎಂದು ಉದಯ್ ಪೊಲೀಸರಿಗೆ ದೂರು ನೀಡಿದ್ದಾರೆ. ತಂಗಿ ಸತ್ತು ಹದಿನೇಳು ದಿನಕ್ಕೆ ಅಕ್ಕನೂ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ. ಕಾಫಿತೋಟದಲ್ಲಿ ಬೆವರು ಸುರಿಸಿ ದುಡಿದು ಮಕ್ಕಳನ್ನು ಸಾಕಿ ಅವರು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ದುರಂತ ಸಾವೀಗೀಡಾಗಿರುವುದು ಹೆತ್ತವರಿಗೆ ಸಹಿಸದಾಗಿದೆ. ಪೊಲೀಸರು ಎರಡೂ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕಿದೆ.

Ad Widget

Related posts

ಸಾಮಾಜಿಕ ಭದ್ರತಾ ಪಿಂಚಣಿ ಅರ್ಜಿಗಳ ತ್ವರಿತ ವಿಲೇವಾರಿ: ಡಾ.ಎಸ್.ಸೆಲ್ವಕುಮಾರ್

Malenadu Mirror Desk

ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿ.ಎಸ್‌. ಯಡಿಯೂರಪ್ಪ

Malenadu Mirror Desk

ಪಟೇಲರ ಬೀಜದ ಹೋರಿಯೂ… ಬೊಮ್ಮಾಯಿ ಸಂಪುಟ ವಿಸ್ತರಣೆಯೂ….

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.