ಬಹುಮುಖ ಪ್ರತಿಭೆ ಹಾಗೂ ಕ್ರೀಡಾ ಸಂಘಟಕನಾಗಿದ್ದ ಯುವಕ ಲೋಹಿತ್ ಕಿಡದುಂಬೆ(33) ಅವರು ಮಹಾಮಾರಿ ಕೊರೊನಕ್ಕೆ ಬಲಿಯಾಗಿದ್ದಾರೆ. ತುಮರಿ ಸಮೀಪದ ಕರೂರಿನ ನಿವಾಸಿಯಾಗಿದ್ದ ಲೋಹಿತ್‍ಗೆ ಕಳೆದ ಒಂದು ವಾರದ ಹಿಂದೆ ಕೊರೊನ ಇರುವುದು ದೃಢವಾಗಿತ್ತು. ವಿಪರೀತ ಕೆಮ್ಮು ಇದ್ದ ಕಾರಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸುಧಾರಿಸದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಉಸಿರಾಟದ ತೊಂದರೆಯಿಂದ ಅವರು ಅಸುನೀಗಿದ್ದಾರೆ.
ಕಡುಕಷ್ಟದಲ್ಲಿಯೇ ಎಂಎಸ್ಸಿ ಮಾಡಿದ್ದ ಲೋಹಿತ್ ಉನ್ನತ ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿದ್ದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಲಾಕ್‍ಡೌನ್ ಕಾರಣದಿಂದ ಊರಿನಿಂದಲೇ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಕರೂರು ಸೀಮೆಯ ಹೋರಾಟಗಾರ ಕಿಡದುಂಬೆ ಶೀನಪ್ಪ ಅವರ ಪುತ್ರನಾಗಿದ್ದ ಲೋಹಿತ್ ಮನೆಯಲ್ಲಿ ಇನ್ನೂ ಇಬ್ಬರಿಗೆ ಕೊರೊನ ಬಂದಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ. ಆದರೆ ಲೋಹಿತ್ ಮಹಾಮಾರಿಗೆ ಬಲಿಯಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಎರಡು ಚಿಕ್ಕ ಮಕ್ಕಳಿದ್ದಾರೆ
ಬಹುಮುಖ ಪ್ರತಿಭೆ
ಲೋಹಿತ್ ವಿದ್ಯಾರ್ಥಿ ದೆಸೆಯಿಂದಲೂ ಯಶಸ್ವಿ ಕ್ರೀಡಾ ಪಟುವಾಗಿದ್ದರು. ಕರೂರು ಹೋಬಳಿಯಲ್ಲಿ ಕ್ರೀಡಾ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಿದ್ದರು. ಹಾಡುಗಾರ, ಜಾನಪದ ಕಲಾವಿದ, ಸಾಮಾಜಿಕ ಕಳಕಳಿ ಹೊಂದಿದ್ದ ಲೋಹಿತ್, ಇತ್ತೀಚೆಗೆ ತುಮರಿ ಭಾಗದಲ್ಲಿ ಲಾಕ್‍ಡೌನ್‍ನಿಂದಾಗಿ ಕಲ್ಲಂಗಡಿ ಬೆಳೆ ನಾಶವಾಗಿ ರೈತರಿಗೆ ಹಾನಿಯಾದ ಬಗ್ಗೆ ಮಲೆನಾಡು ಮಿರರ್‍ಗೆ ಮಾಹಿತಿ ನೀಡಿ ಗಮನ ಸೆಳೆದಿದ್ದರು.