ಸಿಗಂದೂರು ದೇಗುಲಕ್ಕೆ ಬಂದಿದ್ದ ಮಹಿಳೆಯೊಬ್ಬರು ಲಾಂಚ್‍ನಿಂದ ಶರಾವತಿ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮುಂದಾಗಿದ್ದನ್ನು ತಪ್ಪಿಸಿರುವ ಸ್ಥಳೀಯರು ಹಾಗೂ ಲಾಂಚ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕ(46) ಅವರು ದೇವಿ ದರ್ಶನ ಮುಗಿಸಿಕೊಂಡು ಕಳಸವಳ್ಳಿ ಕಡೆಯಿಂದ ಹೊಳೆಬಾಗಿಲು ಕಡೆಗೆ ಪ್ರಯಾಣಿಸುತ್ತಿದ್ದಾಗ ಹಿನ್ನೀರಿನ ಮಧ್ಯಭಾಗದಲ್ಲಿ ಏಕಾಏಕಿ ಹೊಳೆಗೆ ಜಿಗಿದರು. ಈ ಸಂದರ್ಭ ಸ್ಥಳೀಯರಾದ ಪ್ರಕಾಶ್ ಬೆಳಮಕ್ಕಿ ಅವರು ಹೊಳೆಗೆ ಧುಮುಕಿ ಮಹಿಳೆ ರಕ್ಷಣೆಗೆ ಮುಂದಾದರು. ಕೂಡಲೇ ಲಾಂಚ್ ಸಿಬ್ಬಂದಿ ಪ್ರಕಾಶ್ ಮತ್ತು ಮಹಿಳೆಗೆ ರಕ್ಷಣಾ ಜಾಕೆಟ್ ಮತ್ತು ಟೂಬ್‍ಗಳನ್ನು ಎಸೆದು ಮಹಿಳೆ ರಕ್ಷಣೆಗೆ ನೆರವಾದರು.
ಲಾಂಚ್‍ನಲ್ಲಿದ್ದ ಜನರ ಸಮ್ಮುಖದಲ್ಲಿಯೇ ಈ ಸಾಹಸ ದೃಶ್ಯ ನಡೆದಿದ್ದು, ಪ್ರಕಾಶ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ರಕ್ಷಣಾ ಕಾರ್ಯಕ್ಕೆ ಸ್ಥಳೀಯರಾದ ಪ್ರಕಾಶ್ ಸಿಂಗಂದೂರು,ಸುಧಾಕರ್, ಲಾಂಚ್ ಸಿಬ್ಬಂದಿಗಳಾದ ಗಜಕೋಶ, ಬಲರಾಮ, ಮಂಜುನಾಥ್, ಜಗದೀಶ್ ನೆರವಾಗಿದ್ದರು. ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಪಡೆದಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಲಾಂಚ್ ಸಿಬ್ಬಂದಿ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.