ಕಲಾವಿದರು ಉಳಿದರೆ ಮಾತ್ರ ಕಲೆ ಉಳಿಯುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಕಲಾವಿದರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದು, ಸರ್ಕಾರ ಘೋಷಣೆ ಮಾಡಿದ ಅನುದಾನ ಹಲವಾರು ತಾಂತ್ರಿಕ ಸಮಸ್ಯೆಗಳಿಂದಾಗಿ ಲಭ್ಯವಿಲ್ಲದೇ ಕಲಾವಿದರ ಬದುಕು ಸಂಕಷ್ಟದಲ್ಲಿದೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದ್ದಾರೆ.
ಅವರು ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ ಶಿವಮೊಗ್ಗ ಇವರ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರ ಸ್ಮರಣೆ ಮತ್ತು ಕೃತಜ್ಞತಾ ಸಮರ್ಪಣೆ ಸಮಾರಂಭದಲ್ಲಿ ಕಲಾವಿದರಿಗೆ ಕಿಟ್ ವಿತರಿಸಿ ಮಾತನಾಡಿದರು.
ಸರ್ಕಾರ ಕಲಾವಿದರಿಗೆ ಸಹಾಯ ಮಾಡುವಾಗ ಅನೇಕ ಷರತ್ತು ವಿಧಿಸಿದೆ. ಮಾಸಾಶನ ಪಡೆಯುವವರಿಗೆ ಕೋವಿಡ್ ಅನುದಾನ ಸಿಗುವುದಿಲ್ಲ. ಯಾರು ಸರ್ಕಾರದಿಂದ ವಿಶೇಷ ಪೋಷಾಕುಗಳಿಗೆ ಸಹಾಯಧನ ಪಡೆದಿದ್ದಾರೋ ಅಂತಹ ಕಲಾವಿದರಿಗೂ ಸಹ ಸರ್ಕಾರದ ಸಹಾಯಧನವಿಲ್ಲ. ಕಳೆದ ಒಂದು ವರ್ಷದಿಂದ ಯಾವುದೇ ಕಾರ್ಯಕ್ರಮಗಳಿಲ್ಲದೇ ನಿರುದ್ಯೋಗಿಗಳಾದ ಕಲಾವಿದರಿಗೆ ನೆರವಿಗೆ ಅನೇಕ ಷರತ್ತು ವಿಧಿಸಿರುವುದು ಅಕ್ಷಮ್ಯ ಅಪರಾಧ ಎಂದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮತ್ತು ಸಮಘ, ಸಂಸ್ಥೆಗಳು ಕಲಾವಿದರ ನೆರವಿಗೆ ಧಾವಿಸಿದರೆ ಮಾತ್ರ ಕಲೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ನಮ್ಮ ವೇದಿಕೆಯಿಂದ ಜಿಲ್ಲೆಯ ಆಯ್ದ100 ಜಾನಪದ ಕಲಾವಿದರಿಗೆ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಪ್ರಮುಖರಾದ ಪುಷ್ಪಾ ವಿನೋದ್ ಕುಮಾರ್, ಡಿ.ಸಿ. ದೇವರಾಜ್, ಎಸ್. ಶಿವಮೂರ್ತಿ, ಶಾರದಾ ಶೇಷಗಿರಿ ಗೌಡ, ಭೈರಾಪುರ ಶಿವಪ್ಪಗೌಡರು, ಗೌಳಿ ನಾಗರಾಜ್, ಕೃಷ್ಣ ಮೂರ್ತಿ, ಭಾರತಿ ರಾಮಕೃಷ್ಣ, ಅನುರಾಧ, ಸುಶೀಲಾ ಷಣ್ಮುಗಂ ಮೊದಲಾದವರಿದ್ದರು.