ಲಸಿಕೆ ನೀಡದ ಬಿಜೆಪಿ ಸರ್ಕಾರ ತೊಲಗಲಿ, ಪ್ರಧಾನಿ ಹಿಮಾಲಯಕ್ಕೆ ಹೋಗಲಿ, ಅನಾನಸ್ ಸಾಕು, ಲಸಿಕೆ ಬೇಕು. ಮುಂತಾಗಿ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಲಸಿಕೆ ನೀಡುವುದನ್ನು ನಿಲ್ಲಿಸಿರುವುದನ್ನು ವಿರೋಧಿಸಿ ನಗರದ ಸೇರಿದಂತೆ ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಘಟಕಗಳ ನೇತೃತ್ವದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕೊರೋನಾ ಸೋಂಕಿನಿಂದ ಲಕ್ಷಾಂತರ ಜನ ಸಾವು ಕಂಡಿದ್ದಾರೆ. ಲಸಿಕೆ ಕೊಡುವುದನ್ನು ನಿಲ್ಲಿಸಿ ಜನರ ಉಸಿರು ನಿಲ್ಲಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಲಸಿಕೆಯ ಕೊರತೆಯೇ ಇಲ್ಲ ಎಂದು ಹೇಳಿ ಈಗ ಜನರನ್ನು ಲಸಿಕೆ ಪಡೆಯಲು ಪರದಾಡುವಂತೆ ಮಾಡಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಲಸಿಕೆಗೆ ಜಿಲ್ಲಾದ್ಯಂತ ಹಾಹಾಕಾರ ಎದ್ದಿದೆ. ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ದಿನಕ್ಕೆ ಒಂದು ಕೋಟಿ ಲಸಿಕೆ ನೀಡುತ್ತೇವೆ ಎಂದ ಸರ್ಕಾರ ಅದನ್ನು ಮರೆತಿದೆ. ರಾಜ್ಯದ ಬಿಜೆಪಿ ನಾಯಕರು ಮೋದಿಯನ್ನು ಹೊಗಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೊರದೇಶಕ್ಕೆ ಕಳಿಸಲು ಲಸಿಕೆ ಇದೆ. ಭಾರತೀಯರಿಗೆ ಲಸಿಕೆ ಇಲ್ಲವೇ? ಎಂದು ಹರಿಹಾಯ್ದ ಅವರು, ಪ್ರಧಾನಿ ಮೋದಿ ಹಿಮಾಲಯಕ್ಕೆ ಹೋಗುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಪ್ರಮುಖರಾದ ಎಲ್. ರಾಮೇಗೌಡ, ಎಸ್.ಪಿ. ಶೇಷಾದ್ರಿ, ಎನ್. ಉಮಾಪತಿ, ಸೈಯದ್ ವಾಹಿದ್ ಅಡ್ಡು, ಇಕ್ಕೇರಿ ರಮೇಶ್, ಚಂದ್ರಶೇಖರ್, ಚಂದನ್, ರವಿಕುಮಾರ್, ಜಗದೀಶ್ ಮಾತನವರ್, ಮೊಹಮ್ಮದ್ ಆರೀಫ್, ಎನ್.ಡಿ. ಪ್ರವೀಣ್, ಸೌಗಂಧಿಕಾ, ನಾಜೀಮಾ, ತಬಸ್ಸುಮ್, ಸ್ಟೆಲ್ಲಾ ಮಾರ್ಟಿನ್, ಪ್ರಮೋದ್, ಪ್ರೇಮಾ ಮೊದಲಾವರಿದ್ದರು.