ಹಿನ್ನೀರಿಗೆ ಮಹಿಳೆಯೋರ್ವಳು ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪ್ರಕಾಶ್ ಅವರು ತಮ್ಮ ಜೀವದ ಹಂಗು ತೊರೆದು ಬದುಕಿಸಿರುವುದು ಅಭಿನಂದಾರ್ಹ ಸಂಗತಿ. ಸರ್ಕಾರ ಇಂತಹ ಯುವಕರನ್ನು ಗುರುತಿಸಿ ಸೂಕ್ತ ಗೌರವ ಕೊಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ತಿಳಿಸಿದರು.
ತಾಲ್ಲೂಕಿನ ತುಮರಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಬುಧವಾರ ಎಪಿಎಂಸಿ ವತಿಯಿಂದ ಈಚೆಗೆ ಲಾಂಚ್‌ನಿಂದ ಶರಾವತಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಮಹಿಳೆಯನ್ನು ಬದುಕಿಸಿದ ಪ್ರಕಾಶ್ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಅದೊಂದು ಅತ್ಯಂತ ಕಠಿಣ ಸಂದರ್ಭವಾಗಿತ್ತು. ಆದರೆ ಅದ್ಯಾವುದನ್ನೂ ಗಮನಿಸದೆ ಪ್ರಕಾಶ್ ಅವರು ಮಹಿಳೆಯ ಪ್ರಾಣ ಉಳಿಸಬೇಕು ಎನ್ನುವ ಒಂದೆ ಕಾರಣದಿಂದ ನೀರಿಗೆ ಧುಮುಕಿ ಸಾಹಸವನ್ನು ಮೆರೆದು, ಮಹಿಳೆಯನ್ನು ಬದುಕಿಸಿದ್ದಾರೆ. ಅಂತಹವರನ್ನು ಸನ್ಮಾನಿಸುತ್ತಿರುವುದರಿಂದ ನಮ್ಮ ಗೌರವ ಹೆಚ್ಚಿದೆ. ಇಂತಹ ಸಾಹಸಿಗರನ್ನು ಸನ್ಮಾನಿಸುವುದರಿಂದ ಇತರರಿಗೂ ಇಂತಹ ಸಾಹಸ ಕಾರ್ಯದಲ್ಲಿ ತೊಡಗಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ತುಮರಿ ಉಪ ಮಾರುಕಟ್ಟೆ ಅಭಿವೃದ್ದಿಗೆ ನಮ್ಮ ಆಡಳಿತ ಮಂಡಳಿ ಹೆಚ್ಚು ಒತ್ತು ನೀಡಿದೆ. ಈ ಬಾರಿ ೧.೭೦ ಕೋಟಿ ಬಜೆಟ್ ಇದ್ದು, ಈ ಪೈಕಿ ಹೆಚ್ಚು ಹಣವನ್ನು ತುಮರಿ ಮಾರುಕಟ್ಟೆ ಅಭಿವೃದ್ದಿಗೆ ನೀಡಲಾಗಿದೆ. ಮಾರುಕಟ್ಟೆ ಅಭಿವೃದ್ದಿಗೆ ಸಂಬಂಧಪಟ್ಟಂತೆ ಇದ್ದ ಸಣ್ಣಪುಟ್ಟ ತೊಡಕನ್ನು ಶಾಸಕರ ಮಾರ್ಗದರ್ಶನದಲ್ಲಿ ಬಗೆಹರಿಸಿಕೊಂಡು, ಮಾದರಿ ಉಪ ಮಾರುಕಟ್ಟೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಲಾಗಿದೆ ಎಂದು ಹೇಳಿದರು.
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮೀ, ನಿರ್ದೇಶಕರಾದ ಓಂಕಾರ ಜೈನ್, ಪ್ರಮುಖರಾದ ಮಂಜಯ್ಯ ಜೈನ್, ಶ್ರೀನಿವಾಸ್ ಗದ್ದೆಮನೆ, ಅನಿಲಕುಮಾರ್, ಅಶೋಕ ಸೂರೆಮನೆ, ಜಿ.ಟಿ.ಸತ್ಯನಾರಾಯಣ್ ಇನ್ನಿತರರು ಹಾಜರಿದ್ದರು.
previous post
next post