ಪರಿಸರ ಸಂರಕ್ಷಣೆಗೆ ಕೆಲವು ನಿಷ್ಟೂರದ ಕ್ರಮವನ್ನು ತೆಗೆದುಕೊಳ್ಳಬೇಕು. ಪರಿಸರ ಉಳಿದರೆ ಮಾತ್ರ ಮನುಕುಲ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಮತ್ತು ಎಂ.ಎಸ್.ಐ.ಎಲ್. ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಬುಧವಾರ ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಸರೀಕರಣ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪರಿಸರದ ಜೊತೆಗೆ ಮಾನವನ ಸಂಬಂಧ ಅತ್ಯಂತ ಪ್ರಾಚೀನವಾದದ್ದು. ಅಭಿವೃದ್ದಿ ಹೆಸರಿನಲ್ಲಿ, ಆಸ್ತಿ ಸಂಪಾದನೆ ಹೆಸರಿನಲ್ಲಿ ಸಾಕಷ್ಟು ಪರಿಸರವನ್ನು ನಾಶ ಮಾಡಲಾಗಿದೆ. ಭೂಮಿ ಒತ್ತುವರಿ ಹೆಸರಿನಲ್ಲಿ ಅರಣ್ಯ ನಾಶ ಮಾಡಲಾಗಿದೆ. ಇದರಿಂದಾಗಿ ಉತ್ತಮ ವಾತಾವರಣ ಸಿಗುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹಸರೀಕರಣದ ಮೂಲಕ ಪರಿಸರವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ ಪಂಚಾಯ್ತಿ ವ್ಯಾಪ್ತಿಯಲ್ಲೂ ಅಗತ್ಯಕ್ರಮ ತೆಗೆದುಕೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು
ಕೆಳದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್ ಹಾರೆಗೊಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಶೃತಿ ರಮೇಶ್, ಸುಮ, ಸಂದೀಪ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ಡಿ.ಆರ್., ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಸ್ಪಾಕ್ ಅಹ್ಮದ್ ಇನ್ನಿತರರು ಹಾಜರಿದ್ದರು.