ಬೇರೆಬೇರೆ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವವರಿಗೆ ತಾಲ್ಲೂಕಿನಲ್ಲಿಯೆ ಕೋವಿಡ್ ಪ್ರತಿಬಂಧಕ ಲಸಿಕೆಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ನಮ್ಮ ತಾಲ್ಲೂಕಿನವರಾಗಿರಬೇಕು ಜೊತೆಗೆ ವಿದ್ಯಾಭ್ಯಾಸಕ್ಕಾಗಿ ಬೇರೆಬೇರೆ ಜಿಲ್ಲೆಗೆ ಹೋಗಿದ್ದು, ಈಗ ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನಲ್ಲಿದ್ದರೆ ಅವರಿಗೆ ಲಸಿಕೆ ಕೊಡಲು ಆದೇಶ ಮಾಡಲಾಗಿದೆ ಎಂದು ಶಾಸಕ ಹಾಗೂ ಎಂ.ಎಸ್.ಐ.ಎಲ್. ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಹೇಳಿದರು.
ಸಾಗರ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಸಂಸದರು ಮತ್ತು ಶಾಸಕರ ಸಹಭಾಗಿತ್ವದಲ್ಲಿ ಸೇವಾ ಭಾರತಿ, ಎಂಪಿಎಲ್ ಸ್ಪೋಟ್ರ್ಸ್, ಪೆಸ್ ಟ್ರಸ್ಟ್, ಸ್ಪರ್ಶ ಹಾಸ್ಪಿಟಲ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಲ್ಲಿ ಲಸಿಕೆ ಪಡೆಯುವ ಸಂಬಂಧ ಗೊಂದಲ ಬೇಡ. ತಾಲ್ಲೂಕಿನವರಾಗಿದ್ದು ಬೇರೆ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಂತಹ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮತ್ತು ಓದುತ್ತಿರುವ ಕಾಲೇಜಿನ ಗುರುತಿನಪತ್ರವನ್ನು ತಂದು ಲಸಿಕೆಯನ್ನು ಹಾಕಿಸಿಕೊಂಡು ಹೋಗಬಹುದು. ವಿದ್ಯಾರ್ಥಿಗಳಿಗೆ ಲಸಿಕೆ ಕೊಡುವಲ್ಲಿ ತೊಂದರೆ ಕೊಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್. ಮಾತನಾಡಿ, ವಿದ್ಯಾರ್ಥಿಗಳು ಕೊರೋನಾ ಸಂದರ್ಭದಲ್ಲಿ ಹೆಚ್ಚು ಜಾಗೃತೆಯಿಂದ ಇದ್ದು, ಸರ್ಕಾರದ ನಿಯಮಾವಳಿಯನ್ನು ಪಾಲಿಸಬೇಕು. ಜೊತೆಗೆ ನಿಮ್ಮ ಅಕ್ಕಪಕ್ಕದವರಿಗೆ ಸಹ ಕೊರೋನಾ ಎದುರಿಸುವ ಬಗ್ಗೆ ಅರಿವು ಮೂಡಿಸಬೇಕು. ಲಸಿಕೆ ಪಡೆಯದೆ ಇದ್ದ ವಿದ್ಯಾರ್ಥಿಗಳು ತಕ್ಷಣ ಪಡೆದು ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಅಶೋಕ್ ಡಿ. ರೇವಣಕರ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್. ಇನ್ನಿತರರು ಹಾಜರಿದ್ದರು.
previous post
next post