ಕೊರೊನ ಮಹಾಮಾರಿಯಿಂದ ದುಡಿಯುವ ವರ್ಗ ಸಂಕಷ್ಟದಲ್ಲಿದ್ದು, ಅವರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.ಗುರುವಾರ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಸಹಾಯಧನವನ್ನು ಸರ್ಕಾರದಿಂದ ನೇರ ವರ್ಗಾವಣೆ ಮಾಡುವ ಪ್ರಕ್ರಿಯೆಯು ನಡೆಯುತ್ತಿದೆ. ನೊಂದಾಯಿತ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೊರೊನಾದಿಂದ ಆತಂಕಕ್ಕೆ ಒಳಗಾಗದೆ ಸಮಸ್ಯೆಗಳನ್ನು ಎದುರಿಸುವ ದೃಢ ಸಂಕಲ್ಪ ಕೈಗೊಳ್ಳಬೇಕು. ಕಾರ್ಮಿಕರಿಗೆ ನೆರವು ನೀಡುವ ಉದ್ದೇಶದಿಂದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದೆ ಎಂದರು.
ಸರ್ಕಾರ ಸದಾ ಕಾರ್ಮಿಕರ ಜೊತೆಗೆ ಇದೆ. ಪಟ್ಟಣ ವ್ಯಾಪ್ತಿಯ 25 ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಸಾಂಕೇತಿಕವಾಗಿ ಆಹಾರ ವಸ್ತುಗಳ ಕಿಟ್ ವಿತರಿಸಲಾಗುತ್ತಿದ್ದು, ತಾಲೂಕಿನ ಗ್ರಾಪಂ ವಾರು ಸುಮಾರು ಹತ್ತು ಸಾವಿರ ಕಿಟ್ ವಿತರಿಸುವ ಗುರಿ ಹೊಂದಲಾಗಿದೆ ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಕಸ ಸಂಗ್ರಹಣ ವಾಹನಗಳನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲಾಗುವುದು. ಗ್ರಾಮೀಣ ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಮುಟುಗುಪ್ಪೆ, ತಲಗಡ್ಡೆ, ತತ್ತೂರು, ತವನಂದಿ, ಉಳವಿ, ಗೆಂಡ್ಲಾ, ಹೆಚ್ಚೆ, ಹೆಗ್ಗೋಡು, ಇಂಡುವಳ್ಳಿ, ಕುಬಟೂರು, ತಲ್ಲೂರು, ಅಗಸನಹಳ್ಳಿ, ಬೆನ್ನೂರು ಮತ್ತು ಹಳೇ ಸೊರಬ ಗ್ರಾಪಂಗಳಿಗೆ ಕಸ ವಿಲೇವಾರಿ ನೂತನ ವಾಹನಗಳನ್ನು ಹಸ್ತಾಂತರಿಸಲಾಯಿತು. ತಹಶೀಲ್ದಾರ್ ಶಿವಾನಂದ ಪಿ. ರಾಣೆ, ತಾಪಂ ಇಒ ಕೆ.ಜಿ. ಕುಮಾರ್, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ವೀರೇಶ್ ಮೇಸ್ತ್ರಿ, ಪ್ರಭು ಮೇಸ್ತ್ರಿ, ಅನ್ಸರ್ ಅಹ್ಮದ್, ಕಾರ್ಮಿಕ ಇಲಾಖೆಯ ನಿರೀಕ್ಷಕ ಪಿ. ಭೀಮೇಶ್, ಪುರಸಭೆ ಮುಖ್ಯಾಧಿಕಾರಿ ಶೆಲ್ಜಾ ನಾಯ್ಕ್, ಮುಖಂಡರಾದ ಭೋಗೇಶ ಶಿಗ್ಗಾ, ಶಿವಕುಮಾರ ಕಡಸೂರು ಮತ್ತಿತರರಿದ್ದರು.
previous post
next post